ಒಂದು ಸಿನಿಮಾ ನಿರ್ಮಾಣವಾಗೋದಕ್ಕೆ ಸಾಮಾನ್ಯವಾಗಿ ಎಷ್ಟು ಸಮಯ ತೆಗೆದುಕೊಳ್ಳಬಹುದು? ಮೂರು ತಿಂಗಳು, ಆರು ತಿಂಗಳು, ಒಂದು ವರ್ಷ, ಎರಡು ವರ್ಷ, ಹೆಚ್ಚೆಂದರೆ ಮೂರು ವರ್ಷ ತೆಗೆದುಕೊಂಡಿರುವುದನ್ನು ನೀವು ಕೇಳಿರುತ್ತೀರಿ. ಇನ್ನು ಕೆಲ ಗಂಟೆಗಳಲ್ಲಿ, ಕೆಲವೇ ದಿನಗಳಲ್ಲಿ ಕೂಡ ಸಿನಿಮಾ ಮಾಡಿ ಮುಗಿಸಿ, ದಾಖಲೆಗೆ ಪಾತ್ರವಾಗಿರುವ ಅನೇಕ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತವೆ. ಆದರೆ ಇಲ್ಲೊಂದು ಸಿನಿಮಾ ಶುರುವಾಗಿ ಬರೋಬ್ಬರಿ ಒಂಬತ್ತು ವರ್ಷಗಳ ನಂತರ ತನ್ನ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಿ ತೆರೆಗೆ ಬರುತ್ತಿದೆ!
ಅಂದಹಾಗೆ, ಆ ಸಿನಿಮಾದ ಹೆಸರು “ರಾಗ ಶೃಂಗ’. ಬಳ್ಳಾರಿ ಮೂಲದ ಬಿ.ಆರ್ ನಟರಾಜ್, “ರಾಗ ಶೃಂಗ’ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು, ಹಿನ್ನೆಲೆ ಗಾಯನ ಮಾಡಿ, ನಿರ್ಮಾಣ ಮಾಡಿ, ಚಿತ್ರದ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟ ರಾಮಕೃಷ್ಣ, ರಾಘವೇಂದ್ರ ಪ್ರಸಾದ್, ಸುಕುಮಾರ್, ತಿರುಮಲೇಶ್, ಮೀಸೆ ಮೂರ್ತಿ, ಪುಷ್ಪಲತಾ ಮೊದಲಾದವರು ಈ ಚಿತ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತುಳಸಿ ಗಣೇಶ್ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿದ್ದಾರೆ.
ಅದೆಲ್ಲ ಸರಿ, ಒಂದು ಸಿನಿಮಾ ತಯಾರಾಗೋದಕ್ಕೆ ಇಷ್ಟೊಂದು ಸಮಯ ಬೇಕಾ? ಹಾಗಾದ್ರೆ ಆ ಸಿನಿಮಾದಲ್ಲಿ ಅಂಥದ್ದೇನಿದೆ? ಸಿನಿಮಾ ರಿಲೀಸ್‌ಗೆ ಇಷ್ಟೊಂದು ವರ್ಷ ತೆಗೆದುಕೊಂಡಿದ್ದು ಯಾಕೆ? ಅನ್ನೋ ಎಲ್ಲ ಪ್ರಶ್ನೆಗಳಿಗೆ ಇತ್ತೀಚೆಗೆ ಮಾಧ್ಯಮಗಳ ಮುಂದೆ ಚಿತ್ರತಂಡದ ಸಾರಥಿ ಬಿ.ಆರ್ ನಟರಾಜ್ ಆ್ಯಂಡ್ ಟೀಮ್ “ರಾಗ ಶೃಂಗ’ದ ಹಿಂದಿನ ವೃತ್ತಾಂತವನ್ನು ಬಿಚ್ಚಿಟ್ಟಿತು.
ಸುಮಾರು ಒಂಬತ್ತು ವರ್ಷಗಳ ಹಿಂದೆ ನೆಗೆಟಿವ್ ಫಾರ್ಮಾಟ್‌ನಲ್ಲಿ ಚಿತ್ರತಂಡ ಚಿತ್ರದ ಚಿತ್ರೀಕರಣವನ್ನು ಶುರು ಮಾಡಿತ್ತು. ಆ ನಂತರ ನಿರ್ಮಾಪಕರು, ಕಲಾವಿದರು, ನಿರ್ದೇಶಕರು ಬಿಡುವಿದ್ದಾಗಲೆಲ್ಲ ಚಿತ್ರದ ಚಿತ್ರೀಕರಣ ನಡೆಸುತ್ತ ಬಂದಿದ್ದರಿಂದ ಚಿತ್ರದ ಚಿತ್ರೀಕರಣ ಒಂಥರ “ಗಜ ಪ್ರಸವ’ದಂತಾಯಿತು. ಅಷ್ಟರಲ್ಲಾಗಲೇ ಕನ್ನಡ ಚಿತ್ರರಂಗ ಸಂಪೂರ್ಣ ಡಿಜಿಟಲ್‌ವುಯವಾಗಿ ಹೋಗಿತ್ತು. ಚಿತ್ರಗಳ ಚಿತ್ರೀಕರಣ ಮತ್ತು ರಿಲೀಸ್ ಎಲ್ಲವೂ ನೆಗೆಟಿವ್ ಫಾರ್ಮಾಟ್‌ನಿಂದ ಡಿಜಿಟಲ್ ಫಾರ್ಮಾಟ್‌ಗೆ ಬಂದಿದ್ದರಿಂದ, ಮತ್ತೆ ಚಿತ್ರತಂಡ ಈಗಾಗಲೇ ಚಿತ್ರೀಕರಿಸಿದ್ದ ಚಿತ್ರದ ದೃಶ್ಯಗಳನ್ನು ನೆಗೆಟಿವ್‌ನಿಂದ, ಡಿಜಿಟಲ್ ಫಾರ್ಮಾಟ್‌ಗೆ ಪರಿವರ್ತಿಸುವ ಕಾರ್ಯಕ್ಕೆ ಮುಂದಾಯಿತು. ಈ ಕೆಲಸಕ್ಕೆ ಪುನಃ ಒಂದಷ್ಟು ವರ್ಷಗಳು ಹಿಡಿಯಿತು. ಅಲ್ಲಿಗೆ “ರಾಗ ಶೃಂಗ’ ಅನ್ನೋ ಚಿತ್ರ ಬಿಡುಗಡೆಯ ಹೊತ್ತಿಗೆ ದಶಕದ ಹೊಸ್ತಿಲಲ್ಲಿ ಬಂದು ನಿಲ್ಲುವಂತಾಯಿತು. ಕೊನೆಗೂ, ಅಂತೂ-ಇಂತೂ ಸದ್ಯ ಈ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿ “ಉಸ್ಸಪ್ಪಾ…’ ಅಂಥ ನಿಟ್ಟುಸಿರು ಬಿಟ್ಟಿರುವ ಚಿತ್ರತಂಡ, ಇದೇ ಫೆ. 28ಕ್ಕೆ “ರಾಗ ಶೃಂಗ’ ಚಿತ್ರವನ್ನು ಥಿಯೇಟರ್‌ಗೆ ತರುತ್ತಿದೆ.
ಇನ್ನು “ರಾಗ ಶೃಂಗ’ ಚಿತ್ರ ಬಿಡುಗಡೆಯಾಗುತ್ತಿದ್ದರೂ, ನಿರ್ಮಾಪಕರು – ನಿರ್ದೇಶಕರು ಒಂದಿಬ್ಬರು ಸಹ ಕಲಾವಿದರನ್ನು ಹೊರತುಪಡಿಸಿದರೆ, ಉಳಿದಂತೆ ಚಿತ್ರದ ಪ್ರಮುಖ ಕಲಾವಿದರು, ತಂತ್ರಜ್ಞರು ಯಾರೂ ಚಿತ್ರದ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಸುಳಿಯಲೇ ಇಲ್ಲ. ಅದೇನೆಯಿರಲಿ, ಯಾವುದೇ ಸಿನಿಮಾವನ್ನು ನಿಯಮಿತ ಕಾಲಮಿತಿಯೊಳಗೆ ತೆರೆಗೆ ತರದಿದ್ದಲ್ಲಿ, ಅದರ ನಿರ್ಮಾಪಕರು, ನಿರ್ದೇಶಕರು, ಚಿತ್ರತಂಡದ ಸದಸ್ಯರು ಎಷ್ಟರ ಮಟ್ಟಿಗೆ ಹೈರಾಣಾಗಿ ಹೋಗುತ್ತಾರೆ ಅನ್ನೋದಕ್ಕೆ ಈ ಚಿತ್ರ ಸದ್ಯದ ತಾಜಾ ಉದಾಹರಣೆ. ಇನ್ನಾದರೂ ಹೊಸದಾಗಿ ಸಿನಿಮಾ ಮಾಡುವವರು ಇಂಥ ಸಿನಿಮಾಗಳ ನಿರ್ಮಾಣ ನೋಡಿ ಕಲಿಯಬೇಕಾದ ಪಾಠ ಸಾಕಷ್ಟಿದೆ.
ಒಟ್ಟಾರೆ ಚಿತ್ರದ ಪೋಸ್ಟರ್, ಟೈಟಲ್, ಕಥಾಹಂದರ, ಕಲಾವಿದರು ಎಲ್ಲವೂ ದಶಕದ ಹಿಂದಿನದ್ದೇ ಆಗಿರುವುದರಿಂದ, ಹೊಸತನ ಬಯಸುವ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ “ರಾಗ ಶೃಂಗ’ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಬೇಕಿದೆ.