Advertisement

ಸತತ 8ನೇ ಬಾರಿ ಗೆದ್ದ ಹಿರಿಯ ಹುರಿಯಾಳು

12:32 PM May 16, 2018 | Team Udayavani |

ಹಳಿಯಾಳ: ರಾಜಕೀಯ ಹೈವೋಲ್ಟೇಜ್‌ ಕ್ಷೇತ್ರ ಹಳಿಯಾಳದ ರಾಜಕೀಯ ಬಗ್ಗೆ ಕ್ಷೇತ್ರ, ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದಲ್ಲೂ ಚರ್ಚೆಗೊಳಗಾಗಿ ಈ ಬಾರಿ ಹೆಚ್ಚಿನ ಗಮನ ಸೆಳೆದಿದ್ದ ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಕೈ ಕಮಾಲ್‌ ಮಾಡಿದ್ದು ಹಾಲಿ ಸಚಿವ ಆರ್‌.ವಿ.ದೇಶಪಾಂಡೆಗೆ ಮತದಾರ ಕೈ ಹಿಡಿದಿದ್ದು 8ನೇ ಬಾರಿ ವಿಧಾನಸಭೆ ಪ್ರವೇಶಿಸಿ ದಾಖಲೆ ಬರೆದಿದ್ದಾರೆ. ಉ.ಕ. ಜಿಲ್ಲೆಯ ಕುಮಟಾ ಬಾಳಿಗಾ ಕಾಲೇಜ್‌ನಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8ರಿಂದ ಪ್ರಾರಂಭವಾಗಿ 12 ಗಂಟೆಗೆ ಆರ್‌.ವಿ. ದೇಶಪಾಂಡೆ ಆಯ್ಕೆಯಾಗಿರುವುದಾಗಿ ಘೋಷಣೆಯಾಯಿತು. ಅದೇರೀತಿ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಹಳಿಯಾಳ ಮತ್ತು ಜೋಯಿಡಾ, ದಾಂಡೇಲಿಗಳಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

Advertisement

ಪಡೆದ ಮತಗಳು: ಸಚಿವ ಆರ್‌.ವಿ.ದೇಶಪಾಂಡೆ-ಕಾಂಗ್ರೆಸ್‌- 61577, ಸುನೀಲ್‌ ಹೆಗಡೆ-ಬಿಜೆಪಿ-56437, ಜೆಡಿಎಸ್‌ ಪಕ್ಷ ಕೆ.ಆರ್‌. ರಮೇಶ-7209, ಪಕ್ಷೇತರ ಟಿ.ಆರ್‌.ಚಂದ್ರಶೇಖರ-2629, ಇಲಿಯಾಸ ಕಾಟಿ-411, ಯಮುನಾ ಗಾಂವಕರ-ಸಿಪಿಐಎಮ್‌-1127, ಎಮ್‌ಇಪಿ-ಬಡೇಸಾಬ ಕಕ್ಕೇರಿ-913, ಜಹಾಂಗೀರಬಾಬಾಖಾನ್‌-ಐಎನ್‌ಸಿಪಿ-559,ಶಿವಸೇನಾ-ಶಂಕರ ಫಾಕ್ರಿ-546 ಹಾಗೂ ನೋಟಾ-1275 ಮತ ಚಲಾವಣೆಯಾಗಿದೆ. ಅಲ್ಲಲ್ಲಿ ಸಂಭ್ರಮಾಚರಣೆ: ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಚಿವ ಆರ್‌.ವಿ. ದೇಶಪಾಂಡೆ 8ನೇ ಬಾರಿ ಗೆಲುವು ಸಾಧಿ ಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಬೆಂಬಲಿಗರು ಬ್ಲಾಕ್‌ ಕಾಂಗ್ರೆಸ್‌ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಸಂಜೆ ಹಳಿಯಾಳಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೊಕ್ಲೃಕರ ಹಾಗೂ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹಾಗೂ ಅಪಾರ ಬೆಂಬಲಿಗರು, ಮುಖಂಡರೊಂದಿಗೆ ಪಟ್ಟಣಕ್ಕೆ ಆಗಮಿಸಿದ ಸಚಿವ ಆರ್‌.ವಿ.ದೇಶಪಾಂಡೆ ಅವರು ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದಾಗ ನೂರಾರು ಕಾರ್ಯಕರ್ತರು ಅವರನ್ನು ಗುಲಾಲು ಎರಚಿ,ಪಟಾಕಿ ಸಿಡಿಸಿ, ಮಾಲೆ ಹಾಕಿ ಸ್ವಾಗತ ಕೋರಿದರು. ಅವರ ಪತ್ನಿ ರಾಧಾಬಾಯಿ ಅವರು ಆರತಿ ಬೆಳಗಿ ಬರಮಾಡಿಕೊಂಡರು.

ಬಳಿಕ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಸಲ್ಲಿಸಿದ ದೇಶಪಾಂಡೆ ಅವರು ಬೆಂಗಳೂರಿನಿಂದ ಹೈಕಮಾಂಡ್‌ ಕರೆ ಬಂದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬೆಂಗಳೂರಿಗೆ ದೌಡಾಯಿಸಿದರು.

ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ ಮಾಡಲಾಗಿದ್ದು ಸೋತ ಸಮಿಪ ಸ್ಪರ್ಧಿ ಬಿಜೆಪಿಯ ಮಾಜಿ ಶಾಸಕ ಸುನೀಲ್‌ ಹೆಗಡೆ ಹಾಗೂ ಕೆಲವು ಪ್ರಮುಖ ಮುಖಂಡರುಗಳ ಮನೆಗೆ ಬಿಗಿ ಪೊಲೀಸ್‌ ಬಂದೊಬಸ್ತ
ನಿಯೋಜಿಸಲಾಗಿದೆ.

Advertisement

ಕ್ಷೇತ್ರದಲ್ಲಿ ಹಿಂದೆ ಎಂದೂ ಕಾಣದಂತಹ ಅಭಿವೃದ್ಧಿ ಪರ್ವವೇ ಆಗಿದೆ. ಸಾವಿರಾರು ಕೋಟಿ ರೂ.ಗಳನ್ನು ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ವ್ಯಯಿಸಲಾಗಿದೆ. ಕಾಂಗ್ರೆಸ್‌ ಪಕ್ಷ ಬಿಟ್ಟರೆ ಅಭಿವೃದ್ಧಿ ಯಾರಿಂದಲೂ ಸಾಧ್ಯವಿಲ್ಲ ಎಂದು ನೆಚ್ಚಿಕೊಂಡ ಕ್ಷೇತ್ರದ ಮತದಾರ ಪ್ರಭು ಅಭಿವೃದ್ಧಿ ಪರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಮತ್ತೇ ಅಭಿವೃದ್ದಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಮತದಾರರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗುವುದು.
 ಆರ್‌.ವಿ. ದೇಶಪಾಂಡೆ , ಸಚಿವ

ಮತ ಮಾಹಿತಿ
ಸಚಿವ ಆರ್‌.ವಿ. ದೇಶಪಾಂಡೆಯವರ ಆಯ್ಕೆ ಘೋಷಣೆ ಮಧ್ಯಾಹ್ನ 12 ಗಂಟೆಗೆ ಕೂಗುತ್ತಿದ್ದಂತೆ ಜಿಲ್ಲೆಯ ಉಳಿದ ಅಭ್ಯರ್ಥಿಗಳಾದ ಶಾರದಾ ಶೆಟ್ಟಿ, ಶಿವರಾಮ ಹೆಬ್ಟಾರ್‌, ಭೀಮಣ್ಣ ನಾಯ್ಕ,ಸೈಲ್‌, ಮಂಕಾಳ ವೈದ್ಯ ಮುಂತಾದವರು ಅವರಿಗೆ ಅಭಿನಂದನೆ ಸಲ್ಲಿಸಿದರು. ಅಭಿಮಾನಿಗಳು ಜೈಕಾರ ಕೂಗಿದರು. ಅಲ್ಲದೆ, ಸ್ಥಳದಲ್ಲೇ ವಿಜಯೋತ್ಸವ ಆಚರಿಸಿದರು.

ಮತದಾರ ಪ್ರಭು ನೀಡಿರುವ ತೀರ್ಪು ಸ್ವಾಗತಿಸಲಾಗುವುದು. ಅವರ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಗೆದ್ದವರು ಈ ಹಿಂದೆ ಮಾಡಿದ ತಪ್ಪುಗಳನ್ನು ಪುನರಾವರ್ತನೆ ಮಾಡದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಿ ಎಂದು ಹಾರೈಸುತ್ತೇನೆ.
 ಸುನೀಲ್‌ ಹೆಗಡೆ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ 

ಗೆಲುವಿಗೆ ಕಾರಣವೇನು?
ಪಟ್ಟಣದಲ್ಲಿ 24×7 ಕುಡಿವ ನೀರಿನ ಯೋಜನೆ
ಬೃಹತ್‌ ಮೊತ್ತದ ಕಾಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ
ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳು ಆಗಿರುವುದು.
ಅಲ್ಪಸಂಖ್ಯಾತ ಸಮುದಾಯ ನೆಚ್ಚಿಕೊಂಡಿರುವುದು.

ಸೋಲಿಗೆ ಕಾರಣವೇನು?
ಘಟನೆಯೊಂದರಿಂದ ಬಿಜೆಪಿ ಮುಖಂಡ ರಾಜೂ ಧೂಳಿ ಹಾಗೂ ಸುನೀಲ್‌ ನಡುವೆ ವೈಮನಸ್ಸು ಉಂಟಾಗಿದ್ದು.ಮರಾಠಾ ಸಮುದಾಯದ ಮಾಜಿ ಎಸ್ಪಿ ಜಿ.ಆರ್‌. ಪಾಟೀಲ್‌‌ ಬಂಡಾಯ ಸ್ಪರ್ಧಿಸುವುದಾಗಿ ಹೇಳಿ ಬಳಿಕ ಹಿಂದೆ ಸರಿದರೂ ಹೆಗಡೆ ಪರ ಪ್ರಚಾರ ನಡೆಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next