Advertisement

ಹೊಸ ತಾಲೂಕುಗಳಿಗೆ ಅನುದಾನ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ

10:00 AM Jul 10, 2018 | |

ಬೆಂಗಳೂರು: ಈ ಹಿಂದಿನ ಸರಕಾರದಲ್ಲಿ ಘೋಷಣೆಯಾಗಿದ್ದ 50 ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ನಿಗದಿ ಕುರಿತಂತೆ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಜೆ ಹೇಳಿದ್ದಾರೆ. ಹೊಸ ತಾಲೂಕುಗಳಲ್ಲಿ ಮೂಲ ಸೌಕರ್ಯ ಕುರಿತಂತೆ ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಸದಸ್ಯರಾದ ಆರ್‌. ನರೇಂದ್ರ ಮತ್ತು ವಿ.ಸುನೀಲ್‌ ಕುಮಾರ್‌ ಕೇಳಿದ ಪ್ರಶ್ನೆಗಳು ಹಾಗೂ ಇತರೆ ಸದಸ್ಯರು ಎತ್ತಿದ ಉಪಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ತಾಲೂಕುಗಳಿಗೆ ಸರಕಾರ ಮೀಸಲಿಟ್ಟಿರುವ ತಲಾ 10 ಲಕ್ಷ ರೂ. ಅನುದಾನ ತೀರಾ ಕಡಿಮೆ. ಹೀಗಾಗಿ ಬಜೆಟ್‌ ಪೂರ್ವದಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ಈ ವಿಚಾರ ತರಲಾಗಿದೆ. ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಇನ್ನಷ್ಟು ಅನುದಾನದ ಅಗತ್ಯವಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಶೀಘ್ರವೇ ಚರ್ಚಿಸಿ ಅನುದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಇದಕ್ಕೂ ಮುನ್ನ ಪ್ರಶ್ನೆ ಕೇಳಿದ ಬಿಜೆಪಿಯ ಸುನೀಲ್‌ ಕುಮಾರ್‌, ಹಿಂದಿನ ಸರಕಾರ 50 ಹೊಸ ತಾಲೂಕು ಘೋಷಣೆ ಮಾಡಿ ಪ್ರತಿ ತಾಲೂಕಿಗೆ ಕೇವಲ 10 ಲಕ್ಷ ರೂ. ಮಾತ್ರ ಅನುದಾನ ಒದಗಿಸಿದೆ. ಇದರಿಂದ ತಾಲೂಕು ಕಚೇರಿ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗದೆ ಹೆಸರಿಗೆ ಮಾತ್ರ ತಾಲೂಕು ಘೋಷಣೆಯಾದಂತಾಗಿದೆ. ಮೇಲಾಗಿ ಹೊಸ ತಾಲೂಕುಗಳಿಗೆ ಗ್ರಾಮಗಳನ್ನು ಸರಿಯಾಗಿ ಮಾರ್ಕಿಂಗ್‌ ಮಾಡಿಲ್ಲ. ಅದರಲ್ಲೂ ಹೆಬ್ರಿ ತಾಲೂಕಿಗೆ ಜಾಗ ಗುರುತಿಸಲಾಗಿದೆ ಎಂದು ಹೇಳಲಾಗಿದೆಯಾದರೂ ಎಲ್ಲಿ ಜಾಗ ಗುರುತಿಸಲಾಗಿದೆ ಎಂಬುದು ಶಾಸಕರಾದ ತಮ್ಮ ಗಮನಕ್ಕೂ ಬಂದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next