ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಹಾಗೆಯೇ ರಾಜ್ಯಾಧ್ಯಕ್ಷರು, ಬಿಜೆಪಿ ವರಿಷ್ಠರು, ಹೈಕಮಾಂಡ್ ಗೆ ನಾನು ಅಭಿನಂದನೆ ಸಲ್ಲಿಸ್ತೇನೆ ಎಂದು ಮಾಜಿ ಸಚಿವ ಆರ್. ಶಂಕರ್ ಹೇಳಿದರು.
ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬಳಿಕ ಮಾಜಿ ಸಚಿವ ಆರ್. ಶಂಕರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರಿಗೂ ಟಿಕೆಟ್ ಕೊಡಲು ಮುಖ್ಯಮಂತ್ರಿಗಳು ಪ್ರಯತ್ನಿಸಿದರು. ಮುಂದೆ ಅವರಿಗೆ ಅವಕಾಶ ಸಿಗಲಿದೆ. ವಿಶ್ವನಾಥ್ ಅವರು ಉಪ ಚುನಾವಣೆಗೆ ನಿಲ್ಲದಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ. ವಿಶ್ವನಾಥ್ ಅವರು ಚುನಾವಣೆಗೆ ಸ್ಪರ್ಧಿಸಿ ದುಡುಕಿದರು ಅನಿಸುತ್ತದೆ. ವಿಶ್ವನಾಥ್ ಸ್ವಲ್ಪ ಸಮಾಧಾನವಾಗಿದ್ದರೆ ಅವರಿಗೂ ಮುಂದೆ ಅವಕಾಶ ಸಿಗಲಿದೆ. ಮುಖ್ಯಮಂತ್ರಿಗಳು ಅವರಿಗೆ ಮಾತು ಕೊಟ್ಟಿದ್ದರು. ಮುಂದೆ ನಾವೆಲ್ಲ ವಿಶ್ವನಾಥ್ ಅವರಿಗೆ ಅವಕಾಶ ಕೊಡುವಂತೆ ಅವರ ಪರ ವರಿಷ್ಠರ ಜೊತೆ ಮಾತಾನಾಡುತ್ತೇವೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಬುಧವಾರ ರಾತ್ರಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಅವರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ ರಾಜ್ಯ ಕೋರ್ ಕಮಿಟಿ ಶಿಫಾರಸ್ಸು ಮಾಡಿದ್ದ ಎಚ್ ವಿಶ್ವನಾಥ್ ಅವರಿಗೆ ಟಿಕೆಟ್ ಕೈಪ್ಪಿದೆ. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಪ್ರತಾಪ್ ಸಿಂಹ ನಾಯಕ್ ಅವರನ್ನು ಅಚ್ಚರಿಯ ಆಯ್ಕೆಯಾಗಿ ಪರಿಗಣಿಸಿದೆ.