Advertisement

Chess World Cup 2023 ಪ್ರಜ್ಞಾನಂದ ಅಭೂತಪೂರ್ವ ಸಾಧನೆ

12:38 AM Aug 26, 2023 | Team Udayavani |

ಗುರುವಾರವಷ್ಟೇ ಮುಕ್ತಾಯಗೊಂಡ ಫಿಡೆ ಚೆಸ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತದ 18ರ ಹರೆಯದ ಆರ್‌.ಪ್ರಜ್ಞಾನಂದ ರನ್ನರ್‌ ಅಪ್‌ ಆಗಿರುವುದು ದೇಶಕ್ಕೇ ಹೆಮ್ಮೆ ತಂದಿರುವ ವಿಚಾರ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಈ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಪ್ರಜ್ಞಾನಂದ, ವಿಶ್ವ ನಂ.1 ಆಟಗಾರ ಮ್ಯಾಗ್ನಸ್‌ ಕಾರ್ಲ್ಸನ್ ವಿರುದ್ಧ ಸೋತರೂ, ದೇಶವಾಸಿಗಳ ಮನಗೆಲ್ಲುವಲ್ಲಿ ಸಫ‌ಲರಾದರು.

Advertisement

ಆರಂಭದಿಂದಲೂ ಈ ವಿಶ್ವಕಪ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ ಪ್ರಜ್ಞಾನಂದ, ಫೈನಲ್‌ನಲ್ಲಿಯೂ ಕಾರ್ಲ್ಸನ್  ವಿರುದ್ಧ ಗೆದ್ದೇ ಗೆಲ್ಲುತ್ತಾರೆ ಎಂಬ ಭಾವನೆಗಳಿದ್ದವು. ಅಲ್ಲದೆ ಮಂಗಳವಾರ ಮತ್ತು ಬುಧವಾರ ನಡೆದ ಫೈನಲ್‌ ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ಅವರು, ಕಡೆಯ ದಿನದ ಟ್ರೈಬ್ರೇಕರ್‌ನಲ್ಲಿ ಮೊದಲ ಪಂದ್ಯ ಸೋಲುವ ಮೂಲಕ ವಿಶ್ವ ಮುಕುಟ ಕಳೆದು ಕೊಂಡರು. ಪ್ರಜ್ಞಾನಂದ ಅವರ ವಿಶ್ವಕಪ್‌ ಹಾದಿ ಸರಳವಾಗಿ ಇರಲಿಲ್ಲ. ಮೊದಲ ಸುತ್ತಿನ ಪಂದ್ಯದಲ್ಲಿ ಟೈ ಮಾಡಿಕೊಂಡಿದ್ದ ಪ್ರಜ್ಞಾನಂದ, ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ ಗ್ರಾಂಡ್‌ ಮಾಸ್ಟರ್‌ ಮ್ಯಾಕ್ಸಿಮ್‌ ಲಾಗಾರ್ಡೆ ವಿರುದ್ಧ ಗೆದ್ದಿದ್ದರು. ಮೂರನೇ ಸುತ್ತಿನಲ್ಲಿ ಜೆಕ್‌ನ ಅನುಭವಿ ಆಟಗಾರ ಡೆವಿಡ್‌ ನವಾರ, ನಾಲ್ಕನೇ ಸುತ್ತಿನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಅಮೆರಿಕದ ಹಿಕಾರು ನಕಮುರ ವಿರುದ್ಧ ಗೆಲುವು ಸಾಧಿಸಿದ್ದರು. ಐದನೇ ಸುತ್ತಿನಲ್ಲಿ ಹಂಗೇರಿಯ ಫೆರೆನ್‌ ಬೆರ್ಕ್ಸ್, 6ನೇ ಸುತ್ತಿನಲ್ಲಿ ತಮ್ಮ ಸ್ನೇಹಿತ ಅರ್ಜುನ್‌ ವಿರುದ್ಧ ರೋಚಕ ಜಯ ಗಳಿಸಿದ್ದರು.

ಇನ್ನು ಸೆಮಿಫೈನಲ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಇಟಲಿ-ಅಮೆರಿಕನ್‌ ಗ್ರಾಂಡ್‌ಮಾಸ್ಟರ್‌ ಫಾಮಿಯಾನೋ ಕರೂನ ಅವರನ್ನು ಸೋಲಿಸಿ ಅತೀ ಕಿರಿಯ ಆಟಗಾರನಾಗಿ ವಿಶ್ವಕಪ್‌ ಫೈನಲ್‌ಗೇರಿದ ಸಾಧನೆ ಮಾಡಿ, ದೇಶವಾಸಿಗಳ ಮನೆಮಾತಾಗಿದ್ದರು. ಫೈನಲ್‌ನಲ್ಲಿಯೂ ನಂ.1 ಆಟಗಾರ ಕಾರ್ಲ್ಸನ್ ಗೆ ಭರ್ಜರಿ ಸ್ಪರ್ಧೆ ನೀಡಿದ ಅವರು, ಟೈಬ್ರೇಕರ್‌ನಲ್ಲಿ ಸೋತರು. ಅದೂ ಕಿರು ಅವಧಿಯ ರ್ಯಾಪಿಡ್‌ ಗೇಮ್‌ನಲ್ಲಿ ಸೋಲೋಪ್ಪಿಕೊಳ್ಳಬೇಕಾಯಿತು. ಪ್ರಜ್ಞಾನಂದ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರು, ಕ್ರೀಡಾ ವಲಯದ ಆಟಗಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಮುಂದಿನ ದಶಕ ಭಾರತೀಯ ಚೆಸ್‌ ಆಟಗಾರರದ್ದು ಎಂಬ ವಿಶ್ಲೇಷಣೆಯೂ ಈಗ ಶುರುವಾಗಿದೆ. ಕೇವಲ ಪ್ರಜ್ಞಾನಂದ ಅವರಷ್ಟೇ ಅಲ್ಲ, ಇವರ ಜತೆಗೆ ಗುಕೇಶ್‌ ಕೂಡ ವಿಶ್ವಕಪ್‌ನಲ್ಲಿ ಮಿಂಚಿದ್ದಾರೆ. ಹಾಗೆಯೇ ಅರ್ಜುನ್‌, ವಿದಿತ್‌ ಸಂತೋಷ್‌ ಗುಜ್ರಾಥಿ ಅವರೂ ಚೆಸ್‌ರಂಗದಲ್ಲಿ ಮಿಂಚಿನ ದಾಳ ಉರುಳಿಸುತ್ತಿದ್ದಾರೆ. ಈ ಹಿಂದೆ ಚೆಸ್‌ನಲ್ಲಿ ಸೋವಿಯತ್‌ ಯೂನಿಯನ್‌, ಅನಂತರದಲ್ಲಿ ರಷ್ಯಾ ಆಟಗಾರರ ಪ್ರಾಬ ಲ್ಯವಿತ್ತು. ಈಗ ಕೊಂಚ ಕಡಿಮೆಯಾಗಿದೆ. ಆದರೆ ಭಾರತದ ಆಟಗಾರರ ಯುಕ್ತಿ ಮತ್ತು ನೈಪುಣ್ಯ ಗಮನಿಸಿದರೆ, ಮುಂದಿನ 10 ವರ್ಷ ಭಾರತೀಯರೇ ಚೆಸ್‌ ರಂಗ ಆಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಷ್ಟೇ ಅಲ್ಲ ಇತ್ತೀಚೆಗಷ್ಟೇ ಗುಕೇಶ್‌, ಭಾರತದ ನಂಬರ್‌ 1 ಆಟಗಾರ ವಿಶ್ವನಾಥನ್‌ ಆನಂದ್‌ ಅವರನ್ನೂ ಹಿಂದಿಕ್ಕಿ ಸಾಧನೆ ಮಾಡಿದ್ದರು. ಇವರ ಬಗ್ಗೆಯೂ ಸ್ವತಃ ವಿಶ್ವನಾಥನ್‌ ಆನಂದ್‌ ಅವರೇ ಶ್ಲಾಘನೆ ವ್ಯಕ್ತಪಡಿಸಿದ್ದರು. ಈಗ ಚೆಸ್‌ ರಂಗದಲ್ಲಿ ಭಾರತ ಹೊಸ ಇತಿಹಾಸ ಬರೆಯುತ್ತಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ಬರುವ ಆಟಗಾರರಿಗೆ ಉತ್ತೇಜನ ಸಿಗಬೇಕಾಗಿದೆ. ಶಾಲೆಯ ಹಂತದಲ್ಲೇ ಚೆಸ್‌ಗೆ ಹೆಚ್ಚಿನ ಮಹತ್ವ ಕೊಟ್ಟರೆ, ಇನ್ನಷ್ಟು ಆಟಗಾರರು ಬೆಳಕಿಗೆ ಬರಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next