ನಿರ್ದೇಶಕ ಆರ್.ಚಂದ್ರು ಮುಖದಲ್ಲಿ ನಗುಮೂಡಿದೆ. ಈ ನಗುವಿಗೆ ಕಾರಣ “ಕಬ್ಜ’ ಮತ್ತು ಆ ಚಿತ್ರ ತಂದುಕೊಟ್ಟ ಗೆಲುವು. ಬಿಡುಗಡೆಗೆ ಮುನ್ನ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ತೆರೆಕಂಡ ನಂತರವೂ ಮಾಸ್ ಪ್ರಿಯರ ಮನಗೆದ್ದಿದೆ.
ಪರಿಣಾಮವಾಗಿ ಬಾಕ್ಸಾಫೀಸ್ ಕಬ್ಜವಾಗಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಇತ್ತೀಚೆಗೆ ಚಂದ್ರು ಮಾಧ್ಯಮದ ಮುಂದೆ ಬಂದಿದ್ದರು. ಬಿಗ್ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಬಿಡುಗಡೆ ನಂತರ ಏನಾಗುತ್ತದೋ ಎಂಬ ಕುತೂಹಲ ಅನೇಕರಲ್ಲಿತ್ತು. ಆದರೆ, ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ತೆರೆಕಂಡ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಬಾಚಿಕೊಂಡು ಚಿತ್ರ 100 ಕೋಟಿ ಕ್ಲಬ್ ಸೇರಿದೆ ಎಂಬುದು ಗಾಂಧಿನಗರದ ಸಿನಿಪಂಡಿತರ ಲೆಕ್ಕಾಚಾರ.
ನಿರ್ದೇಶಕ ಚಂದ್ರು ಕೂಡಾ “ಕಬ್ಜ’ ಗೆಲುವಿನಿಂದ ಖುಷಿಯಾಗಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ, “ನಾನು ಈ ಸಿನಿಮಾ ವಿಚಾರದಲ್ಲಿ ಯಾವತ್ತೋ ಗೆದ್ದಿದ್ದೇನೆ. ಮೊದಲ ಬಾರಿ ಪುನೀತ್ ರಾಜ್‌ಕುಮಾರ್ ಸೆಟ್‌ಗೆ ಬಂದು ಖುಷಿಪಟ್ಟಾಗ ಗೆದ್ದಿದ್ದೇನೆ, ಸಿನಿಮಾ ರಿಲೀಸ್ ಮುಂಚೆಯೇ ಒಳ್ಳೆಯ ಬಿಝಿನೆಸ್ ಆಗಿ, ಹಾಕಿದ ಬಂಡವಾಳ ವಾಪಾಸ್ ಬಂದಾಗ ಗೆದ್ದಿದ್ದೇನೆ, ಇಡೀ ದೇಶ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಾಗ, ದೊಡ್ಡ ದೊಡ್ಡ ವಿತರಣಾ ಸಂಸ್ಥೆ ಮುಂದೆ ಬಂದಾಗ ಗೆದ್ದಿದ್ದೇನೆ, ಉಪೇಂದ್ರ, ಸುದೀಪ್, ಶಿವಣ್ಣರಂತಹ ದೊಡ್ಡ ನಟರು ಸಾಥ್ ನೀಡಿದಾಗ ಗೆದ್ದಿದ್ದೇನೆ’ ಎನ್ನುವ ಮೂಲಕ ಪ್ಯಾನ್ ಇಂಡಿಯಾ ಮಟ್ಟ ನಿರ್ದೇಶಕರಾಗಿ ಗುರುತಿಸಿಕೊಂಡ ಖುಷಿ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ:ಕಗ್ಗದ ಮೇಲೆ ಸ್ವರ್ಣವಲ್ಲೀ ಶ್ರೀ ಪ್ರವಚನ; ಇಂದಿನಿಂದ ಶಿರಸಿ ಯೋಗ ಮಂದಿರದಲ್ಲಿ!
ಅಂದಹಾಗೆ, ಚಂದ್ರು ಅವರದ್ದು ಒನ್‌ಮ್ಯಾನ್ ಆರ್ಮಿ ಎನ್ನಬಹುದು. ನಿರ್ಮಾಣ, ನಿರ್ದೇಶನ, ವಿತರಣೆ ಎಲ್ಲವೂ ಅವರದ್ದೇ. ಉಪೇಂದ್ರ, ಸುದೀಪ್, ಶಿವಣ್ಣ, ಶ್ರೇಯಾರಂತಹ ದೊಡ್ಡ ಕಲಾವಿದರು ಒಂದು ಕಡೆಯಾದರೆ, ಬೃಹತ್ ಸೆಟ್ ಗಳು ಮತ್ತೂಂದು ಕಡೆ… ಹೀಗಿದ್ದರೂ ಎಲ್ಲವನ್ನು ಸರಿದೂಗಿಸಿಕೊಂಡು, ಚಿತ್ರವನ್ನು 4 ಸಾವಿರ ಪರದೆಯಲ್ಲಿ ಬಿಡುಗಡೆ ಮಾಡಿ, ಚಿತ್ರ ಕೋಟ್ಯಾಂತರ ಬಿಝಿನೆಸ್ ಮಾಡುವಲ್ಲಿ ಚಂದ್ರು ಯಶಸ್ವಿಯಾಗಿದ್ದಾರೆ. ಈ ಮೂಲಕ ಮತ್ತೂಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡದ ಸಿನಿಮಾವೊಂದು ಗಮನ ಸೆಳೆದಿದೆ. ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ಕೆಲವೇ ಕೆಲವು ನಿರ್ಮಾಣ ಸಂಸ್ಥೆಗಳ ಸಾಲಿನಲ್ಲಿ ಈಗ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಕೂಡಾ ಸೇರಿಕೊಂಡಿದೆ. ಚಿತ್ರದ ಆಡಿಯೋ, ಸ್ಯಾಟ್‌ಲೈಟ್, ಓಟಿಟಿ ಹಕ್ಕುಗಳು ಕೂಡಾ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ.
ಒಂದು ಸಿನಿಮಾ ಎಂದ ಮೇಲೆ ಪ್ರಶಂಸೆಯ ಜೊತೆಗೆ ಟೀಕೆ-ಟಿಪ್ಪಣಿ ಸಹಜ. ಸದ್ಯ ಚಂದ್ರು ಇವೆರಡನ್ನೂ ಸಮಾನವಾಗಿ ಸ್ವೀಕರಿಸಿ, “ಕಬ್ಜ’ ಗೆಲುವನ್ನು ಎಂಜಾಯ್ ಮಾಡುತ್ತಿರುವುದಂತೂ ಸುಳ್ಳಲ್ಲ.