ಬೆಂಗಳೂರು : ಆಸ್ತಿ ನೋಂದಣಿಗೆ ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಮುದ್ರಾಂಕ ಶುಲ್ಕಕ್ಕಿಂತ ಕಡಿಮೆ ಪಡೆಯುವ ಅಧಿಕಾರಿಗಳಲ್ಲಿ ಈಗಾಗಲೇ 9 ಮಂದಿಯನ್ನು ಅಮಾನತುಗೊಳಿಸಿದ್ದು, ಬೆಳಗಾವಿ ಇನ್ನೊಬ್ಬ ಅಧಿಕಾರಿಯನ್ನು ಶೀಘ್ರವೇ ಅಮಾನತುಗೊಳಿಸಿ ಆದೇಶ ಹೊರಡಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಬಿಜೆಪಿಯ ಎನ್.ರವಿಕುಮಾರ್ ಅವರು ಕೇಳಿರುವ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಮೋದಿಸಿರುವ ಮಾಗಡಿ ರಸ್ತೆಯ ಕಾವೇರಿ ಪುರ, ಮಾರುತಿ ನಗರ, ಮೀನಾಕ್ಷಿ ನಗರ, ರಂಗನಾಥಪುರ ಮತ್ತು ಸಣ್ಣಕ್ಕಿ ಬಯಲು ಪ್ರದೇಶಗಳ 337 ಮಾರಾಟ ಪತ್ರಗಳ ನೋಂದಣಿಯಿಂದ 103.39 ಕೋಟಿ ರೂ. ಮುದ್ರಾಂಕ ಶುಲ್ಕ ನಷ್ಟವಾಗಿದೆ. ಬೆಳಗಾವಿ ವಿಭಾಗದಲ್ಲೂ ಇದೇ ರೀತಿಯ ಪ್ರಕರಣ ನಡೆದಿದೆ. ಬಿಡಿಎ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಈಗಾಗಲೇ ಅಮಾನತು ಮಾಡಿದ್ದೇವೆ. ಬೆಳಗಾವಿಯ ಅಧಿಕಾರಿಯನ್ನು ಶೀಘ್ರ ಅಮಾನತಿಗೆ ಆದೇಶ ಹೊರಡಿಸಲಾಗುತ್ತದೆ ಎಂದರು.
ಇದನ್ನೂ ಓದಿ:ಗ್ರಾಪಂ ಸಭೆಗಳಲ್ಲಿ ಮಹಿಳೆಯರು ತಪ್ಪದೆ ಪಾಲ್ಗೊಳ್ಳಿ
ರಾಜ್ಯಾದ್ಯಂತ ಮುದ್ರಾಂಕ ಶುಲ್ಕ ಕಡಿಮೆ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಇದೇ ರೀತಿ ಕ್ರಮ ತೆಗೆದುಕೊಳ್ಳಲಿದ್ದೇವೆ. ಇದಕ್ಕಾಗಿ ಪ್ರತ್ಯೇಕ ನಿಯಮವೊಂದನ್ನು ಜಾರಿಗೆ ತರಲಿದ್ದೇವೆ. ಹಾಗೆಯೇ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕವೇ ಭರಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ರವಿ ಕುಮಾರ್ ಮಾತನಾಡಿ, ಸರ್ಕಾರಕ್ಕೆ ನಷ್ಟ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಜತೆಗೆ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.