Advertisement

ಯಾದಗಿರಿ ಜಿಲ್ಲೆ ಕುಗ್ರಾಮದಲ್ಲಿ ಮುಂದಿನ ಗ್ರಾಮ ವಾಸ್ತವ್ಯ: ಅಶೋಕ್‌

09:20 PM Mar 21, 2021 | Team Udayavani |

ಹುಬ್ಬಳ್ಳಿ: ಮುಂದಿನ ಗ್ರಾಮ ವಾಸ್ತವ್ಯವನ್ನು ಯಾದಗಿರಿ ಜಿಲ್ಲೆ ಕುಗ್ರಾಮವೊಂದರಲ್ಲಿ ಮಾಡಲಾಗುವುದು. ಒಂದು ತಿಂಗಳ ಮುಂಚಿತವಾಗಿ ಗ್ರಾಮದ ಹೆಸರು ಘೋಷಣೆ ಮಾಡಿದ್ದೇನೆ. ಇದರಿಂದ ಅಲ್ಲಿನ ಬಹುತೇಕ ಸಮಸ್ಯೆಗಳ ನಿವಾರಣೆ ಹಾಗೂ ಜನರು ಅರ್ಜಿ ಸಲ್ಲಿಸಲು ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ  ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಕಷ್ಟದ ಕಾರ್ಯಕ್ರಮ ಎನ್ನುವುದು ಗೊತ್ತಿದೆ. ಆದರೆ ಆರಿಸಿ ಕಳುಹಿಸಿರುವ ಜನರಿಗೆ ನೆರವಾಗಬೇಕು ಎನ್ನುವ ಕಾರಣಕ್ಕೆ ಮುಂದಾಗಿದ್ದೇನೆ. ದೊಡ್ಡ, ಸಣ್ಣ ಕುಗ್ರಾಮಗಳನ್ನು ಆಯ್ಕೆ ಮಾಡಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಲೆನಾಡು, ಕರಾವಳಿ ಭಾಗಕ್ಕೆ ಹೋಗುತ್ತೇನೆ. ಮುಂದಿನ ಎರಡು ವರ್ಷದ ಅವ ಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ತಲುಪುತ್ತೇನೆ ಎಂದರು.

ಕಂದಾಯ ಇಲಾಖೆ ಮೂಲ ಹಾಗೂ ದೊಡ್ಡ ಇಲಾಖೆಯಾಗಿರುವುದರಿಂದ ನಾವು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದೇವೆ. ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. 12-13 ಶಾಸಕರು ತಮ್ಮ ಕ್ಷೇತ್ರದಲ್ಲಿ ಮಾಡುವಂತೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಇಲಾಖೆ ಸಚಿವರು ಇಂತಹ ವಾಸ್ತವ್ಯ ಮಾಡುವ ನಿರೀಕ್ಷೆಯಿದೆ. ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಗಳ ಕಡೆ ಯೋಜನೆಯಿಂದ ಜಿಲ್ಲಾ ಧಿಕಾರಿಗಳು ಒಂದು ಹಳ್ಳಿಗೆ ಬಂದರೆ ಏನೆಲ್ಲಾ ಒಳ್ಳೆಯದಾಗುತ್ತದೆ ಎನ್ನುವುದು ಜನರಿಗೆ ಗೊತ್ತಾಗುತ್ತಿದೆ. ಇದೊಂದು ಕಾರ್ಯಕ್ರಮವಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಗ್ರಾಮಕ್ಕೆ ಹೋಗದಿದ್ದರೆ ಕ್ರಮ:

ಆಯ್ಕೆಯಾದವರು ಜನರ ಬಳಿಗೆ ಹೋಗಬೇಕು. ಅದೇ ರೀತಿ ಸೇವೆಗೆ ಬಂದಿರುವ ಅಧಿಕಾರಿಗಳು ಜನರ ಬಳಿಗೆ ಹೋಗಿ ಯೋಜನೆ ನೀಡುವುದು ಕೂಡ ಕಡ್ಡಾಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ದೊಡ್ಡವರು. ಹೀಗಾಗಿ ಅಧಿಕಾರಿಗಳು ಪ್ರತಿ ಗ್ರಾಮಕ್ಕೆ ಹೋಗಬೇಕು. ಹೋಗದಿದ್ದರೆ ಕ್ರಮ ಕೈಗೊಳ್ಳುವುದು ಗೊತ್ತಿದೆ ಎಂದರು.

Advertisement

ಇದನ್ನೂ ಓದಿ:ಯಾವ ಪುರುಷಾರ್ಥಕ್ಕೆ ಎಚ್‌ಡಿಕೆ ಸರ್ಕಾರ ಬೀಳಿಸಿದ್ದೇವೊ ಅನ್ನಿಸುತ್ತಿದೆ

ಸಂತ್ರಸ್ತರ ನಿಷ್ಕಾಳಜಿ ಸರಿಯಲ್ಲ:

ಅತಿಯಾದ ಮಳೆ ಹಾಗೂ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಹಾಗೂ ಮನೆ ನಿರ್ಮಾಣಕ್ಕೆ ಅನುದಾನ ನೀಡಲೇ ಬೇಕು. ಇದಕ್ಕೆ ಹಣಕಾಸಿನ ತೊಂದರೆಯಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಮುಖ್ಯಮಂತ್ರಿಗಳು ಹಾಗೂ ತಾವು ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬಾಕಿ ಉಳಿದಿದ್ದರೆ ಕೂಡಲೇ ಪಾವತಿ ಮಾಡುವಂತೆ ಸೂಚಿಸುವುದಾಗಿ ತಿಳಿಸಿದರು.

ಸದ್ಯಕ್ಕೆ ಲಾಕ್‌ಡೌನ್‌ ಇಲ್ಲ

ರಾಜ್ಯದಲ್ಲೆ ಕೋವಿಡ್ ಎರಡನೇ ಅಲೆಯ ಭೀತಿಯಿದೆ. ಹಾಗೆಂದು ಲಾಕ್‌ಡೌನ್‌ ಮಾಡುವ ಯಾವುದೇ ನಿರ್ಧಾರಗಳು ಆಗಿಲ್ಲ. ಪರೀಕ್ಷೆ ಹಾಗೂ ಲಸಿಕೆ ನೀಡುವುದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಕೋವಿಡ್‌-19 ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

ಬೆಲೆ ಏರಿಕೆ ಪರಿಣಾಮ ಬೀರದು

ಪ್ರಧಾನಿ ನರೇಂದ್ರ ಮೋದಿ ಯಾವುದೇ ಕೆಲಸ ಮಾಡಿದರೂ ಜನರ ಕಲ್ಯಾಣಕ್ಕಾಗಿ ಎನ್ನುವುದು ಜನರಿಗೆ ಗೊತ್ತಿದೆ. ಯಾವುದೇ ಕಾರಣಕ್ಕೂ ಜನರಿಗೆ ಮೋಸ ಮಾಡುವುದಿಲ್ಲ ಎನ್ನುವ ಭರವಸೆ ಜನರಲ್ಲಿದೆ. ಕಚ್ಚಾ ತೈಲದ ಬೆಲೆ, ಬೇಡಿಕೆ ಹೆಚ್ಚಾಗಿದೆ. ಅಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಈ ಅಂಶಗಳು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಆರ್‌. ಅಶೋಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next