ಬೆಂಗಳೂರು: ಇಡೀ ದೇಶದಲ್ಲಿ ಕಾಂಗ್ರೆಸ್ ಮೂಲೆ ಗುಂಪಾಗುತ್ತಿದೆ. ರಾಜ್ಯದಲ್ಲಿ ಸಹ ಮೂಲೆ ಗುಂಪಾಗುತ್ತದೆ. ಕಾಂಗ್ರೆಸ್ ನಾಯಕರು ಕೋವಿಡ್, ಟ್ರಾಪಿಕ್ ಜಾಮ್ ಮಾಡುವುದು ಬಿಟ್ಟು ತೀರ್ಥಯಾತ್ರೆ ಮಾಡಲಿ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ಪಂಚರಾಜ್ಯ ಚುನಾವಣೆ ಮತ ಎಣಿಕೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಫಲಿತಾಂಶ ಹೊರಬೀಳುತ್ತಿದೆ. ಬಿಜೆಪಿ ಮತ್ತೆ ಮತ್ತೆ ಜಯಬೇರಿ ಸಾಧಿಸುತ್ತಿದೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಹುಮತ ಸಿಗುತ್ತಿದೆ. ಇಡೀ ದೆಶದಲ್ಲಿ ಪಂಜಾಬ್ ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರವಿತ್ತು, ಈಗ ಅಲ್ಲೂ ಹೀನಾಯ ಸೋಲು ಕಾಣುತ್ತಿದೆ ಎಂದರು.
ಇದನ್ನೂ ಓದಿ:Uttar Pradesh Election result 2022: ಅಖಿಲೇಶ್ ಸೈಕಲ್ ಗಿಂತ ಯೋಗಿ ಓಟವೇ ಜೋರು
ಈ ಫಲಿತಾಂಶ ಮುಂದಿನ ರಾಜ್ಯದ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಬೇರೆ ರಾಜ್ಯಗಳ ಫಲಿತಾಂಶಗಳು ಯಾವುದೇ ರಾಜ್ಯಕ್ಕಾಗಲಿ ದಿಕ್ಸೂಚಿಯಾಗುತ್ತದೆ. ಇದು ಜನರ ದಿಕ್ಸೂಚಿ. ಹೀಗೆಯೇ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 2023ಕ್ಕೆ ಕರ್ನಾಟಕದಲ್ಲೂ ಬಿಜೆಪಿಗೆ ಬಹುಮತ ಬರುತ್ತದೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಪಂಜಾಬ್ ನಲ್ಲಿ ಅಬ್ಬರ ಮಾಡಿದರೂ, ಸರ್ಕಸ್ ಮಾಡಿದರೂ ಕಾಂಗ್ರೆಸ್ ಗೆ ಗೆಲ್ಲಲಾಗಲಿಲ್ಲ. ಬಿಜೆಪಿ ಅಲೆ ಶುರುವಾಗಿದೆ. ನಮ್ಮ ದೃಷ್ಟಿ ಸದ್ಯ ಮುಂದಿನ ಚುನಾವಣೆ ಗೆಲ್ಲುವುದು. ಈ ಫಲಿತಾಂಶ ಬಿಜೆಪಿಗೆ ಸಂತೋಷ ತಂದಿದೆ ಎಂದರು.