ಬೆಂಗಳೂರು: ತಜ್ಞ ವರದಿ ಪ್ರಕಾರ ಕೋವಿಡ್ ಸೋಂಕು ಇನ್ನೂ 6- 7 ತಿಂಗಳು ತೀವ್ರವಾಗಿ ಬಾಧಿಸಲಿದ್ದು, ಸೂಕ್ತ ವ್ಯವಸ್ಥೆಗಳ ಮೂಲಕ ಸಹಜ ಸ್ಥಿತಿಗೆ ತರಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಬಿಬಿಎಂಪಿ ದಕ್ಷಿಣ ವಲಯದಲ್ಲಿ ನಾನಾ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಪ್ರಮುಖರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೋವಿಡ್- 19 ಸೋಂಕಿತರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಕೆಲವೆಡೆ ಕರ್ತವ್ಯಕ್ಕೆ ದಾದಿಯರು ಗೈರಾಗುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಈ ಬಗ್ಗೆ ಉಪ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಕರ್ತವ್ಯಕ್ಕೆ ಗೈರಾದವರನ್ನು ಟ್ರ್ಯಾಕ್ ಮಾಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಒಂದು ವಾರ ಕಾರ್ಯ ನಿರ್ವಹಿಸಿದರೆ ಒಂದು ವಾರ ಕ್ವಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವವರು ಮನೆಗೆ ಹೋಗಲು ಸಾಧ್ಯವಾಗದು. ಹಾಗಾಗಿ ಅವರಿಗೆ ಆಸ್ಪತ್ರೆಗಳ ಬಳಿಯ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರ್ಕಾರದಿಂದಲೇ ಹೋಟೆಲ್‌ಗಳಲ್ಲಿ ರಿಯಾಯ್ತಿ ದರದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಒಂದೊಮ್ಮೆ ಚಿಕಿತ್ಸೆ ನೀಡದಿದ್ದರೆ ಅಂತಹ ವೈದ್ಯರು, ದಾದಿಯರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಕಠಿಣ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಯವರು ಕೋವಿಡ್ ಸೋಂಕಿತರಿಗೆ ಬಿ.ಯು. ಸಂಖ್ಯೆ (ಬೆಂಗಳೂರು ನಗರ ಕೋವಿಡ್ ಸೋಂಕಿತರ ಸಂಖ್ಯೆ) ತೆಗೆದುಕೊಂಡು ಬರುವಂತೆ ಸೂಚಿಸುವಂತಿಲ್ಲ. ರೋಗಿ ಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸಿಕೊಂಡು ನಂತರ ಪಾಲಿಕೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಬಿಬಿಎಂಪಿ ದಕ್ಷಿಣ ವಲಯದ ಪ್ರಮುಖರ ಸಭೆ ನಡೆಸಲಾಗಿದ್ದು, ಸೋಮವಾರ ವಲಯ ವ್ಯಾಪ್ತಿಯ ಪಾಲಿಕೆ ಸದಸ್ಯರ ಸಭೆ ಕರೆಲಾಗುವುದು ಎಂದು ಆರ್.ಅಶೋಕ್ ಹೇಳಿದರು. ದಕ್ಷಿಣ ವಲಯದ ಪ್ರಮುಖರ ಸಭೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯಾರೆಡ್ಡಿ ಉಪಸ್ಥಿತರಿದ್ದರು.