Advertisement
ಬೌ ದ್ಧಿಕ ಸಾಮರ್ಥ್ಯವನ್ನು ಬೆಳೆಸುವ ಮತ್ತು ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸ್ಪರ್ಧೆಗಳಲ್ಲಿ ರಸಪ್ರಶ್ನೆ (ಕ್ವಿಝ್) ಸ್ಪರ್ಧೆಯೂ ಒಂದು. ಗ್ರಹಿಸಿದ ಮಾಹಿತಿ, ಓದಿ ತಿಳಿದುಕೊಂಡ ವಿಚಾರಗಳು, ಸ್ಮರಣೆಯಲ್ಲಿ ಉಳಿದ ವಿಚಾರಗಳು ಪ್ರಶ್ನೆಯನ್ನು ಕೇಳಿದ ತತ್‌ಕ್ಷಣ ಸಕಾಲಕ್ಕೆ ನೆನಪಾಗಿ ಉತ್ತರಿಸುವ ಚಾಣಾಕ್ಷತನಕ್ಕೆ ಈ ರಸಪ್ರಶ್ನೆ ಸ್ಪರ್ಧೆ ನಮ್ಮನ್ನು ಒಡ್ಡುತ್ತದೆ.
ಮೊದಲೇ ಹೇಳಿದಂತೆ ರಸಪ್ರಶ್ನೆ ಆಗಾಗ ಹಮ್ಮಿಕೊಳ್ಳುವುದರಿಂದ ಇದು ವಿದ್ಯಾರ್ಥಿಗಳ ಜ್ಞಾನವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಠ್ಯದಲ್ಲಿನ ಅಂಶಗಳನ್ನೇ ರಸಪ್ರಶ್ನೆ ರೂಪದಲ್ಲಿ ಕೇಳಿದರೆ, ಒಂದು ವೇಳೆ ಆತ ತಪ್ಪು ಉತ್ತರ ನೀಡಿದರೂ, ಮುಂದೆ ಸರಿ ಉತ್ತರ ತಿಳಿಸಿದ ಮೇಲೆ ಆ ಉತ್ತರ ಆತನ ನೆನಪಿನಲ್ಲಿ ಸದಾ ಕಾಲ ಉಳಿಯುವಂತಾಗುತ್ತದೆ. ಸ್ಪರ್ಧಿಗಳಲ್ಲದ ವಿದ್ಯಾರ್ಥಿಗಳೂ ಇದನ್ನು ನೆನಪಿನಲ್ಲಿ ಉಳಿದುಕೊಳ್ಳುವಂತೆ ವೇದಿಕೆ ಸೃಷ್ಟಿಸಿಕೊಡುತ್ತದೆ. ಪರೀಕ್ಷೆಯ ದೃಷ್ಟಿಯಿಂದ ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಂಡರೆ, ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವರ್ಧನೆಗೆ ಪಠ್ಯರಹಿತ, ಪ್ರಪಂಚದ ಆಗುಹೋಗುಗಳನ್ನು ತಿಳಿದುಕೊಳ್ಳುವ ಅವಕಾಶ ಲಭ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ತೆರನಾದ ಸ್ಪರ್ಧೆ ಹಮ್ಮಿಕೊಳ್ಳುವುದು ಕಡಿಮೆಯಾಗುತ್ತಿದೆ.
Related Articles
ಟಿವಿ, ಪತ್ರಿಕೆಗಳಲ್ಲಿ ಮೆದುಳಿಗೆ ಕೆಲಸ ಕೊಡುವ ರಸಪ್ರಶ್ನೆಗಳು ಪ್ರಕಟವಾಗುತ್ತಲೇ ಇರುತ್ತವೆ. ಇವನ್ನೇ ಆಯ್ದುಕೊಂಡು ವಿದ್ಯಾರ್ಥಿಗಳ ಚುರುಕುತನಕ್ಕೆ ಕೆಲಸ ಕೊಡುವ ಕೆಲಸವನ್ನು ಅಧ್ಯಾಪಕರು ಮಾಡಬಹುದು. ಶಾಲೆ, ಕಾಲೇಜು, ಅಂತರ್ ಶಾಲಾ, ಕಾಲೇಜು ಮಟ್ಟಗಳಲ್ಲಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟಗಳಲ್ಲಿ ರಸಪ್ರಶ್ನೆ ಸ್ಪರ್ಧೆಗಳು ನಡೆಯುತ್ತಲಿರುತ್ತವೆ. ಇಂಥವುಗಳಿಗೆ ಆಯ್ದ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವ ಮೂಲಕವೂ ಅವರ ಜ್ಞಾನ ವೃದ್ಧಿಗೆ ಶಿಕ್ಷಕರು ಪ್ರಯತ್ನಿಸಬಹುದು.
Advertisement
ಪಠ್ಯೇತರ ಆಸಕ್ತಿತರಗತಿಗಳಲ್ಲೂ ಆಯಾ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ, ಸಣ್ಣ ಬಹುಮಾನವನ್ನು ನೀಡುವ ಕೆಲಸ ಅಧ್ಯಾಪಕರು ಮಾಡಬೇಕು. ಬಹುಮಾನ ನಗದು ಆದರೂ ಸರಿಯೇ, ಚಾಕಲೇಟ್ ಆದರೂ ಸರಿಯೇ.. ಇವೆಲ್ಲ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ. ಶಾಲಾ ಹಂತದಲ್ಲಿ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ವಿದ್ಯಾರ್ಥಿಯೊಬ್ಬ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಮುಂದೆ ಐಎಎಸ್ ಅಧಿಕಾರಿಯಾಗಿ ಬೆಳೆಯುವ ಅವಕಾಶವನ್ನೂ ಪಡೆದುಕೊಳ್ಳಬಹುದು. ಪಠ್ಯೇತರ ಆಸಕ್ತಿಯನ್ನೂ ಈ ರಸಪ್ರಶ್ನೆ ಸ್ಪರ್ಧೆಗಳು ಬೆಳೆಸುತ್ತವೆ. ಕೌಶಲಾಭಿವೃದ್ಧಿಗೆ ಪೂರಕ
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸೃಜನಶೀಲ ಪ್ರತಿಭೆಗಳು ರಸಪ್ರಶ್ನೆಯ ಮೂಲಕ ಹೊರ ಬರಬಹುದು. ಹಾಡಿನ ಮೂಲಕ, ಪ್ರಶ್ನೆಯ ಮೂಲಕ ಹೀಗೆ ನಾನಾ ಮಾದರಿಯಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಪ್ರಯೋಗಿಸಿ ನೋಡಬಹುದು. ದಡ್ಡ ವಿದ್ಯಾರ್ಥಿಯೋರ್ವನನ್ನೂ ಸರಾಸರಿ ಅಂಕ ಪಡೆಯುವ ನಿಟ್ಟಿನಲ್ಲಿ ತಯಾರುಗೊಳಿಸುವ ಶಕ್ತಿ ರಸಪ್ರಶ್ನೆಗಿದೆ ಎನ್ನುತ್ತಾರೆ ಶಿಕ್ಷಕಿ ಅಮಿತಾ ಚಿದಾನಂದ್. ಕ್ವಿಝ್ ಎನ್ನುವುದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅವರಿಗೆ ಹೊಸ ಹೊಸ ಅವಕಾಶಗಳನ್ನು ತೆರೆದಿಡು ತ್ತದೆ. ಹೀಗಾಗಿ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಇಂಥ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕಾಗಿದೆ. ಹೊರೆಯಾಗದಿರಲಿ
ವಿದ್ಯಾರ್ಥಿಗಳ ಪ್ರತಿಭೆಯನ್ನು ಒರೆಗೆ ಹಚ್ಚುವ ಅಥವಾ ಅವರ ಬುದ್ಧಿಶಕ್ತಿಗೆ ಯಾವುದೇ ಕೆಲಸ ಕೊಡುವ ಮೊದಲು ಅದು ಆ ವಿದ್ಯಾರ್ಥಿಗೆ ಹೊರೆಯಾಗದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ.
ಈಗಾಗಲೇ ಶೈಕ್ಷಣಿಕ ಪಠ್ಯಗಳನ್ನು ಓದುವುದನ್ನೇ ವಿದ್ಯಾರ್ಥಿಗಳಿಗೆ ಹಿಂಸೆಯಾಗುವ ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಇರುವಾಗ, ಅವರ ಮಾನಸಿಕ ತಾಕತ್ತಿಗೆ ಇನ್ನಷ್ಟು ಕಠಿನ ಪರಿಸ್ಥಿತಿಗಳನ್ನು ಸೃಷ್ಟಿಸುವುದು ತಪ್ಪು. ಹಾಗಾಗಿ ರಸಪ್ರಶ್ನೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇರಿಕೆ ಮಾಡದೆ, ವಿದ್ಯಾರ್ಥಿಗಳೇ ಇಷ್ಟಪಟ್ಟು ತೊಡಗಿಸಿಕೊಳ್ಳುವಂತೆ ಮಾಡುವ ಚಾಣಾಕ್ಷತನ ಅಧ್ಯಾಪಕರಲ್ಲಿರಬೇಕು. ಇದಕ್ಕೆ ಅಂಕ ನೀಡಲಾಗುತ್ತದೆ ಎಂದು ಹೆದರಿಸದೆ, ಜ್ಞಾನವರ್ಧನೆಗೆ ಉತ್ತಮ ಎಂದು ಪ್ರೀತಿಯಿಂದ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕಾದ ಗುರುತರ ಜವಾಬ್ದಾರಿಯೂ ಅಧ್ಯಾಪಕರಿಗಿದೆ. ಧನ್ಯಾ ಬಾಳೆಕಜೆ