ನವದೆಹಲಿ: ‘ದೇಶದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಎಂಬುದು ಬೃಹತ್ ಆಂದೋಲನವಾಗಬೇಕು. ಜತೆಗೆ, ದೇಶ ಬಾಂಧವರೆಲ್ಲರೂ ಉತ್ತಮ ಆರೋಗ್ಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಈ ಬಾರಿಯ ತಮ್ಮ ‘ಮನ್ ಕೀ ಬಾತ್’ನಲ್ಲಿ ದೇಶದ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಹೇಳಿದ್ದ ಮಾತನ್ನೇ ‘ಮನ್ ಕೀ ಬಾತ್’ನಲ್ಲಿಯೂ ಪುನರುಚ್ಚರಿಸಿದರು.
”ಇದೇ ಅ.2ರಂದು ನಾವು ಮಹಾತ್ಮಾ ಗಾಂಧಿಯವರ 150ನೇ ಹುಟ್ಟುಹಬ್ಬ ಆಚರಿಸಲಿದ್ದೇವೆ. ಆ ಹೊತ್ತಿಗೆ ಬಹಿರ್ದೆಸೆ ಮುಕ್ತ ಭಾರತವನ್ನು ಉಡುಗೊರೆಯಾಗಿ ಬಾಪುವಿಗೆ ನೀಡಲು ನಿರ್ಧರಿಸಲಾಗಿದೆ. ಜತೆಗೆ, ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಶ್ರೀಕಾರ ಹಾಡುವ ಮೂಲಕವೂ ನಾವು ಬಾಪುವಿಗೆ ಮತ್ತೂಂದು ಉಡುಗೊರೆ ನೀಡಬಹುದು” ಎಂದರು.
ಪ್ಲಾಸ್ಟಿಕ್ ನಿರ್ಮೂಲನೆಗೆ ಕಾರ್ಪೊರೇಟ್ ಸಂಸ್ಥೆಗಳ ಸಹಕಾರ ಕೋರಿದ ಅವರು, ”ದೇಶದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಅನ್ನು ಸೂಕ್ತ ರೀತಿ ವಿಲೇವಾರಿ ಮಾಡುವಂಥ, ಪ್ಲಾಸ್ಟಿಕ್ ಮರುಬಳಕೆ ಮಾಡುವಂಥ ಅಥವಾ ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸುವಂಥ ತಂತ್ರಜ್ಞಾನ ಆವಿಷ್ಕರಿಸಬೇಕು. ಇದೇ ದೀಪಾವಳಿಯೊಳಗೆ ಸುರಕ್ಷತಾ ವಿಧಾನಗಳ ಮೂಲಕ ಪ್ಲಾಸ್ಟಿಕ್ ವಿಲೇವಾರಿ ಮಾಡುವಂಥ ವ್ಯವಸ್ಥೆಗಳು ಜಾರಿಗೊಳ್ಳಬೇಕು” ಎಂದು ಆಶಿಸಿದರು.
29ರಿಂದ ‘ಫಿಟ್ ಇಂಡಿಯಾ’: ಇಡೀ ದೇಶವನ್ನು ರೋಗ ಮುಕ್ತವಾಗಿರುವ, ಎಲ್ಲೆಲ್ಲೂ ಆರೋಗ್ಯ ನಳನಳಿಸುವಂತೆ ಮಾಡುವ ಉದ್ದೇಶದಿಂದ ದೇಶದ ಎಲ್ಲಾ ನಾಗರಿಕರಿಗಾಗಿ ಇದೇ 29ರಿಂದ ‘ಫಿಟ್ ಇಂಡಿಯಾ’ ಎಂಬ ಹೊಸ ಅಭಿಯಾನ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಇದೇ ವೇಳೆ, ನಮ್ಮ ದೇಶವನ್ನು ಪ್ರಾಕೃತಿಕ ಸೌಂದರ್ಯ ಹಾಗೂ ವನ್ಯಜೀವಿನಗಳ ಸ್ವರ್ಗವನ್ನಾಗಿಸಲು ಎಲ್ಲರೂ ಪಣ ತೊಡಬೇಕೆಂದು ಆಶಿಸಿದರು.