ಬೆಂಗಳೂರು: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿಯನ್ನು ಕಿತ್ತೂಗೆಯಲು ಪ್ರಜಾಪ್ರಭುತ್ವದ ಉಳಿವಿಗಾಗಿ “ಕ್ವಿಟ್ ಇಂಡಿಯಾ ಚಳವಳಿ’ ಮಾದರಿಯಲ್ಲೇ “ಕ್ವಿಟ್ ಬಿಜೆಪಿ ಚಳವಳಿ’ ನಡೆಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ಗೆ ಮುತ್ತಿಗೆ ಹಾಕುವ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ವಿರುದ್ಧ ಮುಂದಿನ ದಿನಗಳಲ್ಲಿ ಜೈಲ್ ಭರೋ ಚಳವಳಿ ಸೇರಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಬಿಜೆಪಿ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಸಿಎಎ ವಿರೋಧಿ ಹೋರಾಟಗಾರರು, ಕಾಂಗ್ರೆಸ್ಸಿಗರ ವಿರುದ್ಧ ವಿನಾಕಾರಣ ದೇಶದ್ರೋಹದ ಪ್ರಕರಣ ದಾಖಲಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಪ್ರಕರಣಗಳನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ ಅವರು ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ಪೊಲೀಸರು ಇರುವುದು ಕಾನೂನು ರಕ್ಷಣೆ, ಪಾಲನೆಗೇ ಹೊರತು ಸರ್ಕಾರಗಳು ಹೇಳಿದಂತೆ ನಡೆಯುವುದಕ್ಕಲ್ಲ ಎಂದು ಗುಡುಗಿದರು.
ಮೋದಿ, ಅಮಿತ್ ಶಾರಿಂದ ದೇಶ ನಾಶ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ನಾಶ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ತರುತ್ತಿದ್ದು, ದಲಿತರು, ಹಿಂದುಳಿದವರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ. ಮಂಗಳೂರಿನ ಪ್ರತಿಭಟನೆ ವೇಳೆ ಇಬ್ಬರನ್ನು ಗೋಲಿಬಾರ್ ನಡೆಸಿ ಕೊಂದಿದ್ದಾರೆ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫಲಕ ಹಿಡಿದ ಯುವತಿ, ಬೀದರ್‌ನ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಸಿಎಎ ವಿರುದ್ಧ ವಿಡಂಬನಾತ್ಮಕ ನಾಟಕ ಮಾಡಿದ 11 ವರ್ಷದ ಪುಟ್ಟ ಬಾಲಕಿ, ತಾಯಿ, ಮುಖ್ಯ ಶಿಕ್ಷಕಿ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಕಿಡಿ ಕಾರಿದರು. ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್, ಶಾಸಕಿ ಸೌಮ್ಯಾರೆಡ್ಡಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಮಾವಾಸ್ಯೆ ಎಂದು ಲೇವಡಿ: “ಬೆಂಗಳೂರು ದಕ್ಷಿಣ ಕೇಂದ್ರದ ಸಂಸದ ತೇಜಸ್ವಿ ಸೂರ್ಯನನ್ನು ಅಮಾವಾಸ್ಯೆ’ ಎಂದೇ ಕರೆಯುತ್ತೇನೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಅದೆಂತಧ್ದೋ ಸೂರ್ಯ, ಕೋಮು ಸೌಹಾರ್ದತೆ ಕದಡುವ ಹೇಳಿಕೆ ನೀಡಿದರೂ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಕಾಂಗ್ರೆಸ್‌ನವರ ಮೇಲೆ ಮಾತ್ರ ಕೇಸ್ ಹಾಕುತ್ತಾರೆ ಎಂದು ದೂರಿದರು. ಆಗ ನೆರೆದಿದ್ದ ಕಾರ್ಯಕರ್ತರು ತೇಜಸ್ವಿ ಸೂರ್ಯ ಎಂದು ನೆನಪಿಸಿದಾಗ ಸಿದ್ದರಾಮಯ್ಯ, “ನಾನು ಅವನನ್ನು ಅಮಾವಾಸ್ಯೆ’ ಎಂದೇ ಕರೆಯುತ್ತೇನೆಂದು ಪುನರುತ್ಛರಿಸಿದರು.