Advertisement

ಕೋವಿಡ್ ಪರಿಣಾಮ ಸದ್ದಿಲ್ಲದೇ ಡಿಜಿಟಲೀಕರಣ!

12:37 PM May 25, 2020 | mahesh |

ಕೋವಿಡ್ ಭಾರತಕ್ಕೆ ಕಾಲಿಟ್ಟದ್ದರಿಂದ ಎಲ್ಲ ಕಡೆ ಬರೀ ದುಃಖವೇ ಕಾಣಿಸುತ್ತಿದೆ. ಅಲ್ಲೊಂದು ಇಲ್ಲೊಂದು ಹೊರತುಪಡಿಸಿ, ಉಳಿದ ಯಾವ ಕ್ಷೇತ್ರದಲ್ಲೂ ಸಂಭ್ರಮವಿಲ್ಲ. ಇದರ ನಡುವೆ ಅತ್ಯಂತ ರಚನಾತ್ಮಕ ಬದಲಾವಣೆಯೊಂದು ಸದ್ದಿಲ್ಲದೇ ಆಗಿದೆ. ಅದು ಡಿಜಿಟಲೀಕರಣ. ಹಿಂದೆ ಎಲ್ಲವನ್ನೂ ಡಿಜಿಟಲ್‌ ಮಾಡಲು ಕೇಂದ್ರ ಸೆಣಸಬೇಕಿತ್ತು. ಈಗ ತಮ್ಮಷ್ಟಕ್ಕೆ ತಾವೇ ಜನರು ಒಪ್ಪಿಕೊಳ್ಳುತ್ತಿದ್ದಾರೆ. ಕ್ಯಾಪ್‌ಜೆಮಿನಿ ಮಾಡಿದ ಸಮೀಕ್ಷೆಯಲ್ಲಿ ಬದಲಾದ ಮಾನಸಿಕತೆಯ ವಿವರ ನೀಡಲಾಗಿದೆ.

Advertisement

ಧ್ವನಿ ಮೂಲಕ ನಿಯಂತ್ರಣ
ಕೋವಿಡ್ ಬಂದ ಮೇಲೆ ಜನರಿಗೆ ವಸ್ತುಗಳನ್ನು, ವ್ಯಕ್ತಿಗಳನ್ನು ಮುಟ್ಟುವುದೆಂದರೆ ಬಹಳ ಹೆದರಿಕೆ. ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರು ಕೆಲವು ವಿಶೇಷ ತಂತ್ರಜ್ಞಾನಗಳಿಗೆ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿರುವುದು ವಾಯ್ಸ ಬೇಸ್ಡ್ ಇಂಟರ್‌ಫೇಸ್‌. ಅಂದರೆ ಇಲ್ಲಿ ಸ್ಪರ್ಶವಿಲ್ಲದೇ, ನಮ್ಮ ಮಾತಿನ ಮೂಲಕ ಕೆಲಸ ಮಾಡಿಸಬಹುದಾದ ಸಾಧನಗಳಿಗೆ ಆದ್ಯತೆ. ಅಲೆಕ್ಸಾ, ಗೂಗಲ್‌ ಅಸಿಸ್ಟೆಂಟ್‌ನಂತವು ಇಂತಹ ಸಾಧನಗಳು.
ಮೊಬೈಲ್‌ನಲ್ಲೂ ಅಂತಹ ಆ್ಯಪ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಮೊಬೈಲ್‌ ಪಾವತಿಗೆ ಆದ್ಯತೆ
ಜನ ವಸ್ತುಗಳನ್ನು ಖರೀದಿಸಲು ಹೋದಾಗ, ಮನೆಗೇ ತರಿಸಿಕೊಂಡಾಗ ನಗದು ಅಥವಾ ಕಾರ್ಡ್‌ ನೀಡಲು ಬಯಸುತ್ತಿದ್ದರು. ಈ ಮಾದರಿಯಲ್ಲಿ ಸ್ಪರ್ಶ ಅನಿವಾರ್ಯ. ಆದ್ದರಿಂದ ಮೊಬೈಲ್‌ ಆ್ಯಪ್‌ಗಳ ಮೂಲಕ ನೇರವಾಗಿ ಖಾತೆಗೆ ಹಣ ರವಾನಿಸುವ ಸ್ವಭಾವ ಜಾಸ್ತಿಯಾಗಿದೆ. ಶೇ.90ರಷ್ಟು ಮಂದಿ ಈ
ದಾರಿಯನ್ನೇ ಆಯ್ದುಕೊಳ್ಳುತ್ತಿದ್ದಾರೆಂದು ಕ್ಯಾಪ್‌ಜೆಮಿನಿ ಹೇಳಿದೆ.

ಸಂಪರ್ಕರಹಿತ ಸೇವೆಗೆ ಗ್ರಾಹಕರ ಆದ್ಯತೆ
ಬಹುತೇಕ ಗ್ರಾಹಕರು ಕೋವಿಡ್ ಕಾರಣದಿಂದ ಸಂಪರ್ಕರಹಿತ ಸೇವೆಯನ್ನು ಬಯಸುತ್ತಿದ್ದಾರೆ. ಇದನ್ನು ಎಲ್ಲ ಕಂಪನಿಗಳು, ಸೇವಾ ಸಂಸ್ಥೆಗಳು ಗಮನಿಸಿವೆ. ಉದಾಹರಣೆಗೆ ಕಾರು ಕಂಪನಿಗಳು, ಸಂಪೂರ್ಣ ಪ್ರಕ್ರಿಯೆಯನ್ನು ಅಂತರ್ಜಾಲದ ಮುಖೇನ ಮುಗಿಸಿ, ಕಾರನ್ನು ತಾವೇ ಖುದ್ದಾಗಿ, ಗರಿಷ್ಠ ಸ್ವಚ್ಛತಾ ನಿಯಮ ಅನುಸರಿಸಿ ಮನೆಗೆ ತಲುಪಿಸಿ ಬರುತ್ತಿವೆ.

ಮುಖಭಾವವೇ ನಿಮ್ಮ ಗುರುತು
ಮುಖಚಿತ್ರದಿಂದ ಅಥವಾ ಫೇಶಿಯಲ್‌ ರೆಕಗ್ನಿಶನ್‌ ತಂತ್ರಜ್ಞಾನದ ಮೂಲಕ ನಿಮ್ಮನ್ನು ಗುರ್ತಿಸುವ ವ್ಯವಸ್ಥೆಯನ್ನು ವಾಣಿಜ್ಯ ಕಂಪನಿಗಳು, ಸರ್ಕಾರಗಳು
ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಒಬ್ಬ ವ್ಯಕ್ತಿಯನ್ನು ಅವನ ಮುಖಚಿತ್ರದ ಮೂಲಕ ತಕ್ಷಣ ಗುರ್ತಿಸುವುದು ಈ ತಂತ್ರಜ್ಞಾನದ ವಿಶೇಷ. ಮುಖದ ಅಳತೆಗಳೆಲ್ಲ ಈ ತಂತ್ರಜ್ಞಾನದ ಮೂಲಕ ದಾಖಲಾಗಿರುತ್ತವೆ. ಎಂತಹ ಜಂಗುಳಿಯಲ್ಲೂ ಈ ತಂತ್ರಜ್ಞಾನ ನಿಮ್ಮನ್ನು ಗುರ್ತಿಸುತ್ತದೆ. ಪ್ರಸ್ತುತ ಮಾಲ್‌ಗ‌ಳಿಗೆ, ಬ್ಯಾಂಕ್‌ಗಳಿಗೆ, ಕಚೇರಿಗಳಿಗೆ, ಸರ್ಕಾರಿ ಕೇಂದ್ರಗಳಿಗೆ ಹೋಗುವ ವ್ಯಕ್ತಿಗಳು ಈ ರೀತಿಯ ತಂತ್ರಜ್ಞಾನ ಬಯಸುತ್ತಿದ್ದಾರೆ. ಹೆಚ್ಚಿನ ಸಂವಹನವಿಲ್ಲದೇ ವ್ಯಕ್ತಿಗಳನ್ನು ಗುರ್ತಿಸಲು ಇದರಿಂದ ಸಾಧ್ಯ. ಉದಾಹರಣೆಗೆ ಈ ತಂತ್ರಜ್ಞಾನವನ್ನು ಒಂದು ಕಾಲೇಜಿನಲ್ಲಿ ಅಳವಡಿಸಿಕೊಂಡಿದ್ದರೆ, ತರಗತಿಗೆ ಯಾರು ಗೈರಾಗಿದ್ದಾರೆ ಎಂದು ತಕ್ಷಣ ಗೊತ್ತಾಗುತ್ತದೆ. ಆದರೂ ಈ ತಂತ್ರಜ್ಞಾನ ಖಾಸಗಿತನಕ್ಕೆ ಅಡ್ಡಿ ಎಂದು ಹಲವರು ಭಾವಿಸುತ್ತಾರೆ.

Advertisement

82 ಶೇ. ಕೋವಿಡ್ ವೇಳೆಯಲ್ಲಿ ಸ್ಪರ್ಶರಹಿತ ಸಂವಹನ ಬಯಸಿದ ಗ್ರಾಹಕರ ಸಂಖ್ಯೆ
84 ಶೇ. ಕೋವಿಡ್ ವೇಳೆ ಸ್ಪರ್ಶರಹಿತ ಸಂವಹನ ಬಯಸಿದ 41ರಿಂದ 50 ವಯಸ್ಸಿನ ಗ್ರಾಹಕರ ಸಂಖ್ಯೆ.
55 ಶೇ. ವ್ಯಾಪಾರಿ ಜಾಗಗಳಲ್ಲಿ ಮೊಬೈಲ್‌ ಆ್ಯಪ್‌ ಬಳಸಿ ವ್ಯವಹಾರ ಮಾಡುತ್ತಿರುವ, 31ರಿಂದ 40 ವಯಸ್ಸಿನ ಗ್ರಾಹಕರ ಸಂಖ್ಯೆ.

Advertisement

Udayavani is now on Telegram. Click here to join our channel and stay updated with the latest news.

Next