ಗದಗ: ಶೀಘ್ರ ಸಾಲ ಮರುಪಾವತಿಸುವ ಫಲಾನುಭವಿಗಳನ್ನು ಗುರುತಿಸಿ, ಮರುಸಾಲ ಪಡೆಯಲು ಪ್ರೋತ್ಸಾಹಿಸಬೇಕು. ಪಿಎಂಇಜಿಪಿ ಯೋಜನೆಯಡಿ ಸ್ವ ಉದ್ಯೋಗ ಆರಂಭಿಸಲು ನಿರುದ್ಯೋಗ ಯುವ, ಯುವತಿಯರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ (ಡಿಎಲ್‌ಆರ್‌ಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಅನುಷ್ಠಾನಿತ ಯೋಜನೆಗಳಾದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಸಿಎಂ ಅಮೃತ ಜೀವನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ವಿತರಣೆಗೆ ಬ್ಯಾಂಕ್‌ಗಳು ವಿಳಂಬ ಮಾಡಿದರೆ ಸಹಿಸಲಾಗದು ಎಂದರು.
ಸಾಲ ಸೌಲಭ್ಯ ಪಡೆಯುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರಧಾನಮಂತ್ರಿ ಜನಧನ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಕಡ್ಡಾಯವಾಗಿ ಆಧಾರ ಜೋಡಣೆ ಮಾಡಬೇಕು. ಯೋಜನೆಯ ವಿವರ ಹಾಗೂ ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಕುರಿತು ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡಬೇಕು ಎಂದರು.
ಜಿಪಂ ಸಿಇಒ ಡಾ| ಸುಶೀಲಾ ಬಿ. ಮಾತನಾಡಿ, ಅರ್ಜಿದಾರರ ಸಮಸ್ಯೆಗಳನ್ನು ಪರಿಗಣಿಸಿ, ಆದಷ್ಟು ಬೇಗ ಬ್ಯಾಂಕ್ ಅಧಿ ಕಾರಿಗಳು ಸಾಲ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ನ ಮಾರ್ಗಸೂಚಿಗಳ ಕುರಿತು ಫಲಾನುಭವಿಗಳಿಗೆ ತಿಳಿವಳಿಕೆ ನೀಡಬೇಕು. ರೈತರು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ನ ಸಾಲ ಸೌಲಭ್ಯ ಪಡೆಯುವಂತೆ ಉತ್ತೇಜಿಸಬೇಕು ಸೂಚಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಜಬ್ಟಾರ್ ಅಹ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಮಾರ್ಚ್ 2022ರ ಅಂತ್ಯದವರೆಗೆ ಒಟ್ಟು 172 ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಸಾಲ ಠೇವಣಿ ಅನುಪಾತ ಮಾರ್ಚ್ 2022ರ ವರೆಗೆ ಶೇ. 86.25 ಪ್ರಗತಿಯಾಗಿದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿ ಕಾರಿಗಳು ಶಾಖೆವಾರು ಸಾಲ ಠೇವಣಿ ಅನುಪಾತವನ್ನು ಕೂಲಂಕುಷವಾಗಿ ಪರಿಶೀಲಿಸಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ.
ಮಾರ್ಚ್ ಅಂತ್ಯದವರೆಗೆ ಕೃಷಿ ವಲಯಕ್ಕೆ 3320.41 ಕೋಟಿ ರೂ. ಸಾಲ ನೀಡಲಾಗಿದೆ. ಎಂಎಸ್‌ಎಂಇ ವಲಯಕ್ಕೆ 3320.41 ಕೋಟಿ ರೂ., ಇತರೆ ಆದ್ಯತಾ ಕ್ಷೇತ್ರಕ್ಕೆ 537 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಒಟ್ಟಾರೆ ಆದ್ಯತಾ ಕ್ಷೇತ್ರಕ್ಕೆ 4479.54 ಕೋಟಿ ರೂ. ಸಾಲ ವಿತರಿಸಲಾಗಿದೆ. ವಲಯವಾರು ಸಾಲ ವಿತರಣೆಯ ಶೇ 98.97ರಷ್ಟು ಇದ್ದು, ಗದಗ ತಾಲೂಕಿನಲ್ಲಿ ಶೇ. 109.17, ಗಜೇಂದ್ರಗಡದಲ್ಲಿ ಶೇ. 55.83, ಲಕ್ಷ್ಮೇಶ್ವರ ಶೇ. 93.80, ಮುಂಡರಗಿ ಶೇ. 99.42, ನರಗುಂದದಲ್ಲಿ ಶೇ. 100.18, ರೋಣದಲ್ಲಿ ಶೇ. 120.34, ಶಿರಹಟ್ಟಿ ಶೇ. 87.42 ಸಾಲ ನೀಡಲಾಗಿದೆ.
ಪಿಎಂ ಸ್ವನಿಧಿ ಯೋಜನೆಯಡಿ ಈವರೆಗೆ ಒಟ್ಟಾರೆ 3701 ಬೀದಿ ವ್ಯಾಪಾರಸ್ಥರ ಅರ್ಜಿಗಳ ಪೈಕಿ 3321 ಅರ್ಜಿಗಳಿಗೆ ಸಾಲ ವಿತರಿಸಲಾಗಿದೆ. ಸರಕಾರದ ಯೋಜನೆಗಳ ಸೌಲಭ್ಯಗಳ ಕುರಿತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಮುದ್ರಾ ಸಾಲ ಯೋಜನೆಯಡಿ ಶಿಶು ಯೋಜನೆಯಲ್ಲಿ 37,363 ಫಲಾನುಭವಿಗಳಿಗೆ 65.21 ಕೋಟಿ ರೂ., ಕಿಶೋರ ಯೋಜನೆಯಡಿ 22140 ಫಲಾನುಭವಿಗಳಿಗೆ 247.35 ಕೋಟಿ ರೂ. ಹಾಗೂ ತರುಣ ಯೋಜನೆಯಡಿ 1511 ಫಲಾನುಭವಿಗಳಿಗೆ 101 ಕೋಟಿ ರೂ. ಸೇರಿದಂತೆ ಒಟ್ಟು 413 ಕೋಟಿ ರೂ. ವಿತರಣೆಯಾಗಿದೆ ಎಂದು ಸಭೆಗೆ ತಿಳಿಸಿದರು.
ಸರ್ಕಾರದ ವಿವಿಧ ಯೋಜನೆಗಳಾದ ಎನ್.ಆರ್. ಎಲ್.ಎಂ. ಸಾಮಾಜಿಕ ಭದ್ರತಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು. ಆರ್‌ಬಿಐ ಎ.ಜಿ.ಎಂ. ಬಿಸ್ವಾಸ್, ನಬಾರ್ಡ್‌ದ ಡಿಡಿಎಂ ರಾಮನ್ ಜಗದೀಶನ್, ಎಸ್ ಬಿಐ ರೀಜನಲ್ ಬಿಸಿನೆಸ್ ಆಫೀಸ್ ಚೀಫ್ ಮ್ಯಾನೇಜರ್ ಮಹಾಂತೇಶ, ಸೇರಿದಂತೆ ಇತರರಿದ್ದರು.