Advertisement
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಬರ ಕಾಮಗಾರಿಗಳ ಸಭೆ ನಡೆಸಿದ ಅವರು, ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ನಿಮ್ಮಲ್ಲಿ ಸದ್ಯ ನೀರಿನ ಪರಿಸ್ಥಿತಿ ಹೇಗಿದೆ? ಅದಕ್ಕೆ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಟಾಸ್ಕ್ಫೋರ್ಸ್ ಅನುದಾನದಲ್ಲಿ 25 ಲಕ್ಷ ರೂ.ಗೆ ಕ್ರಿಯಾಯೋಜನೆ ರೂಪಿಸಿರುವುದಾಗಿ ವಿವರಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಸರ್ಕಾರ 50 ಲಕ್ಷ ರೂ. ನೀಡಿದರೆ ನೀವು 25 ಲಕ್ಷಕ್ಕೆ ಯಾಕೆ ಕ್ರಿಯಾಯೋಜನೆ ಮಾಡಿದಿರಿ. ಘೋಷಿತ ಅನುದಾನಕ್ಕೆ ಬಿಟ್ಟು ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾಯೋಜನೆ ಮಾಡುತ್ತಾರಾ? ಸೇವೆಗೆ ಸೇರಿ ಎಷ್ಟು ವರ್ಷಗಳಾದವು ಎಂದು ಜಿಪಂ ಪ್ರಭಾರ ಇಇಯನ್ನು ತರಾಟೆ ತೆಗೆದುಕೊಂಡರು.
ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದೋ ಅಲ್ಲಿಗೆ ಎರಡು ದಿನದೊಳಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ. ಈಗಾಗಲೇ ಸರ್ಕಾರ ಎಲ್ಲ ಕ್ಷೇತ್ರಗಳಿಗೆ 50 ಲಕ್ಷ ರೂ. ನೀಡಿದೆ. ಅದಲ್ಲದೇ, ಟ್ಯಾಂಕರ್ ಮೂಲಕ ಅಥವಾ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಿದರೆ ಅದಕ್ಕೆ ಪ್ರತ್ಯೇಕ ಅನುದಾನ ನೀಡಲಾಗುವುದು ಎಂದು ಹೇಳಿದರು. ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕೊಳವೆಬಾವಿಗಳನ್ನು ಕರೆಯಿಸಿದರೂ ಪ್ರಯೋಜನವಾಗುತ್ತಿಲ್ಲ. 500 ಅಡಿ ಆಳದಲ್ಲೂ ನೀರಿಲ್ಲ. ಅಂಥ ಕಡೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಖಾಸಗಿ ಕೊಳವೆಬಾವಿ ಮಾಲೀಕರು ತಮಗೆ ಬೇಕಾದಾಗ ನೀರು ಪಡೆಯುವುದರಿಂದ ಸಮಸ್ಯೆಯಾಗುತ್ತದೆ ಎಂದು ವಿವರಿಸಿದರು. ಕೊಳವೆಬಾವಿಗಳ ಮಾಲೀಕರಿಗೆ ಪ್ರತಿ ತಿಂಗಳು ಬಾಡಿಗೆ ಪಾವತಿಸಿ. ಟ್ಯಾಂಕರ್‌ಗಳಿಗೆ ಕಾಲಕಾಲಕ್ಕೆ ಹಣ ನೀಡುವ ಮೂಲಕ ನೀರು ಪೂರೈಸಬೇಕು ಎಂದು ಡಿಸಿ, ಸಿಇಒಗೆ ಸೂಚಿಸಿದರು.
ಶಾಸಕರಾದ ಪ್ರತಾಪಗೌಡ ಪಾಟೀಲ, ಬಸವರಾಲ ಪಾಟೀಲ ಇಟಗಿ, ದದ್ದಲ್ ಬಸನಗೌಡ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕುರ್ಡಿ, ಭೋಗಾಪುರ ಸೇರಿ ವಿವಿಧೆಡೆ ಅನೇಕ ವರ್ಷಗಳಿಂದ ಕಾಮಗಾರಿ ನಡೆದಿದೆ. ಇಂದಿಗೂ ನೀರು ಕೊಡಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಶಾಸಕ ಡಾ| ಶಿವರಾಲ ಪಾಟೀಲ ಮಾತನಾಡಿ, ನಮಗೆ ಯಾವುದಾದರೂ ಯೋಜನೆ ವಹಿಸಬೇಕು ಎಂದರೆ ಉತ್ತಮ ಏಜೆನ್ಸಿಗಳಿಲ್ಲ. ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ, ಕ್ಯಾಶುಟೆಕ್ ಸಂಸ್ಥೆಗಳ ವಿಶ್ವಾಸ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯಿಂದ ಕೆಲಸ ಮಾಡಿಸಿಕೊಳ್ಳಿ ಎಂದು ಸಚಿವರು ಸೂಚಿಸಿದರು.
ಉದ್ಯೋಗ ಖಾತ್ರಿಯಡಿ ಜಿಲ್ಲೆಯಲ್ಲಿ ಸಾಮೂಹಿಕ ಪ್ರಗತಿ ನಡೆಯುತ್ತಿದೆ. ಕೇವಲ ಕೂಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡದೆ ವೈಯಕ್ತಿಕ ಕೆಲಸಗಳಿಗೂ ಆದ್ಯತೆ ನೀಡಬೇಕು. ದನದ ಕೊಟ್ಟಿಗೆ, ಬದುಗಳ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಬೇಕು.
ನರೇಗಾದರಡಿ ಎಷ್ಟೇ ಕೂಲಿ ಸೃಜನೆ ಮಾಡಿದರೂ ಚಿಂತೆ ಬೇಡ. ಸರ್ಕಾರ ಹಣ ನೀಡಲು ಸಿದ್ಧವಿದೆ ಎಂದು ಸಚಿವರು ಹೇಳಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ, ಸಂಸದ ಬಿ.ವಿ.ನಾಯಕ, ಡಿಸಿ ಶರತ್ ಬಿ. ಸಿಇಒ ನಲಿನ್ ಅತುಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.