ಕಲಬುರಗಿ: ಶಿಕ್ಷಣದಲ್ಲಿಯೇ ದೇಶದ ಭವಿಷ್ಯ ಮತ್ತು ಅಭಿವೃದ್ಧಿ ಅಡಗಿದೆ ಎಂದು ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ| ಶಿವರಾಜ ವಿ. ಪಾಟೀಲ ಹೇಳಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸರ್ವಜ್ಞ ಮತ್ತು ಜಸ್ಟೀಸ್ ಶಿವರಾಜ ಪಾಟೀಲ ವಸತಿ ಪಿಯು ವಿಜ್ಞಾನ ಕಾಲೇಜ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಕಡೆಗಣಿಸಿದರೆ ದೇಶದ ಅಭಿವೃದ್ಧಿ ಶೂನ್ಯವಾಗಲಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೆ ವಿದ್ಯಾರ್ಥಿ ಶಿಕ್ಷಣ ಅಪೂರ್ಣವಾಗಬಾರದು. ಅದರಲ್ಲೂ ಹಣಕಾಸಿನ ಕೊರತೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿ ಶಿಕ್ಷಣ ಅರ್ಧಕ್ಕೆ ನಿಂತರೂ ಸಮಾಜ ಅಗತ್ಯ ನೆರವು ಕಲ್ಪಿಸುವ ಮೂಲಕ ಶಿಕ್ಷಣ ಪೂರ್ಣಗೊಳಿಸಲು ನೆರವಾಗಬೇಕೆ ಎಂದು ಸಲಹೆ ನೀಡಿದರು.
ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯ ಈಗಹೆಚ್ಚಿದೆ. ಸರ್ವಜ್ಞ ವಸತಿ ಪಿಯು ವಿಜ್ಞಾನ ಕಾಲೇಜನ ಗುಣಮಟ್ಟದ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿ ಡಾ| ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಡಾ| ಎಸ್.ಎಚ್. ಕಟ್ಟಿ, ಮಾನವೀಯ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಮೊಹ್ಮದ್ ಬಿನ್ ಅಲಿ, ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಲೆಕ್ಕ ಪರಿಶೋಧಕ ಆರ್.ಎಸ್. ಬಿಜಾಸ್ಪೂರ ,ಕೆನರಾ ಬ್ಯಾಂಕ್ ಸ್ಥಳೀಯ ಶಾಖೆ ಮುಖ್ಯ ವ್ಯವಸ್ಥಾಪಕ ಶರಣಪ್ಪ ಪೂಜಾರಿ, ಸಂಸ್ಥೆ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ, ಅಧ್ಯಕ್ಷೆ ಗೀತಾ ಸಿ. ಪಾಟೀಲ, ನಿರ್ದೇಶಕ ಅಭಿಷೇಕ ಸಿ. ಪಾಟೀಲ, ಪ್ರಾಂಶುಪಾಲರಾದ ಎಂ.ಸಿ. ಕಿರೇದಳ್ಳಿ, ವಿನುತಾ ಆರ್.ಬಿ. ಕಾಲೇಜನ ಶೈಕ್ಷಣಿಕ ನಿರ್ದೇಶಕ ಪೃಥ್ವಿರಾಜ, ಗುರುರಾಜ ಕೆ ಇದ್ದರು.