ನಾಯಕನಹಟ್ಟಿ: ವಸತಿ ಯೋಜನೆ ಫಲಾನುಭವಿಗಳು ತಕ್ಷಣ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಡಿ. ಭೂತಪ್ಪ ಹೇಳಿದರು.
ಸೋಮವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ವಸತಿ ಯೋಜನೆಯಡಿ 516 ಜನರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಕೇವಲ 372 ಜನರು ಮಾತ್ರ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಉಳಿದವರು ದಾಖಲೆಗಳನ್ನು ಒದಗಿಸಲು ಹಾಗೂ ಬುನಾದಿ ನಿರ್ಮಾಣಕ್ಕೆ ಆಸಕ್ತಿ ವಹಿಸುತ್ತಿಲ್ಲ. ಒಮ್ಮೆಲೆ ಎಲ್ಲ ಮನೆಗಳಿಗೆ ಹಣ ಮಂಜೂರು ಮಾಡಲಾಗುತ್ತಿದ್ದು, ಮನೆ ನಿರ್ಮಾಣ ಮಾಡಿಕೊಳ್ಳದೇ ಇರುವುದರಿಂದ ಹಣ ಮಂಜೂರಾತಿ ವಿಳಂಬವಾಗಿದೆ.
ಪಪಂ ಸದಸ್ಯರು ತಮ್ಮ ವ್ಯಾಪ್ತಿಯ ಫಲಾನುಭವಿಗಳಿಗೆ ಈ ಬಗ್ಗೆ ತಿಳಿ ಹೇಳಬೇಕು. ಮನೆ ನಿರ್ಮಾಣ ಸಾಧ್ಯವಾಗದೇ
ಇರುವ ವ್ಯಕ್ತಿಗಳು ಸೌಲಭ್ಯ ಹಿಂಪಡೆಯುವ ಪತ್ರ ನೀಡಬೇಕು. ಹೀಗಾದಲ್ಲಿ ಇದರ ಅವಕಾಶವನ್ನು ಇತರೆ ಫಲಾನುಭವಿಗಳಿಗೆ ನೀಡಬಹುದು ಎಂದರು.ಸರ್ಕಾರ ಹೊಸದಾಗಿ 300 ಮನೆಗಳಿಗೆ ಮಂಜೂರಾತಿ ನೀಡಿದೆ. ಇದರಲ್ಲಿ 250 ಎಸ್ಟಿ ಹಾಗೂ 50 ಎಸ್ಸಿ ಗುಂಪುಗಳಿಗೆ ನೀಡಲಾಗುವುದು. ಇದರ ಆಯ್ಕೆ ಪ್ರಕ್ರಿಯೆ ತಕ್ಷಣ ಆರಂಭವಾಗಲಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಭವನಕ್ಕೆ ಹಿಂದಿನ ಸರಕಾರ 50 ಲಕ್ಷ ರೂ. ಬಿಡುಗಡೆ ಮಾಡಿದೆ. ಅನುದಾನ ದೊರೆತು ಎರಡು ವರ್ಷ ಕಳೆದರೂ ಹಣ ಬಳಕೆಯಾಗಿಲ್ಲ. ತಕ್ಷಣ ನಿರ್ಮಾಣ ಆರಂಭಿಸಬೇಕು ಎಂದು ಪಪಂ ಸದಸ್ಯೆ ಮಂಜುಳಾ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಎರಡು ನಿವೇಶನಗಳಿದ್ದು, ಎಲ್ಲಿ ನಿರ್ಮಿಸಬೇಕು ಎಂಬ ಗೊಂದಲದಿಂದ ವಿಳಂಬವಾಗಿತ್ತು. ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಅಂಬೇಡ್ಕರ್ ಕಾಲೋನಿಯ ಭಜನಾ ಮಂದಿರದ ಬಳಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.
ಸರ್ವೆ ನಂ 191 ರಲ್ಲಿನ ನಿವಾಸಿಗಳಿಗೆ ಖಾತೆಗಳನ್ನು ನೀಡಬೇಕೆಂದು ಪಪಂ ಸದಸ್ಯೆ ಷನುಪ್ತ ಯಾಸ್ಮಿನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ನಿರೀಕ್ಷಕ ಶಿವಕುಮಾರ್, ಸರ್ಕಾರದ ಆದೇಶದಂತೆ ಸದರಿ ಪ್ರದೇಶದ ನಿವೇಶನಗಳನ್ನು ನೀಡುವುದಕ್ಕೆ ಸಂಬಂಧಿಸಿದ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ
ಸ್ಥಳೀಯ ಗ್ರಾಪಂ ಅನುಮತಿ ನೀಡಿದೆ. ಸರ್ಕಾರದ ಸ್ಪಷ್ಟ ಸೂಚನೆಯಂತೆ ಇಂತಹ ಪ್ರಕರಣಗಳಲ್ಲಿ ನಿರ್ಮಿಸಿದ ಮನೆಗಳಿಗೆ ಖಾತೆ ಮಾಡಲು ಸಾಧ್ಯವಿಲ್ಲ ಎಂದರು. ಮುಖ್ಯಾಧಿಕಾರಿ ಮಾತನಾಡಿ, ಈ ಬಗ್ಗೆ ನಮಗೆ ಗೊಂದಲವಿದೆ. ಇದನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಪಪಂ ಸದಸ್ಯ ಮನ್ಸೂರ್ ಶುದ್ಧ ಕುಡಿಯುವ ನೀರಿನವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಭೂತಪ್ಪ, ಪಟ್ಟಣಕ್ಕೆ ವಾಣಿವಿಲಾಸ ಸಾಗರದ ನೀರು ಪೂರೈಕೆಯಾಗುತ್ತಿದೆ. ಆದರೆ ಇದಕ್ಕೆ ಸೂಕ್ತವಾದ ಶುದ್ಧೀಕರಣ ಘಟಕವಿಲ್ಲ. ಆದ್ದರಿಂದ ಶುದ್ಧ ಕುಡಿಯುವ ನೀರು ಪೂರೈಕೆ 1.5 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಪಪಂ ಅಧ್ಯಕ್ಷೆ ನೀಲಮ್ಮ, ಸದಸ್ಯರಾದ ಮಂಜುಳಾ,ಬೋರಮ್ಮ, ನಾಗರಾಜ್ ಮತ್ತಿತರರು ಇದ್ದರು.