ಮಂಡ್ಯ: ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಉದ್ಯೋಗ ಬೇಡಿಕೆಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಜಿಪಂ ಪ್ರಭಾರ ಸಿಇಒ ಎನ್.ಡಿ.ಪ್ರಕಾಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕುಡಿಯುವ ನೀರು ಮತ್ತು ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ನಡೆದ ಇಒ, ಪಿಡಿಒ ಹಾಗೂ ಎಇಇ (ಆರ್.ಡಬ್ಲ್ಯೂ.ಎಸ್)ಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು ಮತ್ತು ಉದ್ಯೋಗ ಬೇಡಿಕೆಗೆ ಸಂಬಂಧಿಸಿದಂತೆ ದೂರುಗಳು ಸ್ವೀಕೃತವಾಗದಂತೆ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸ್ಥಳ ಪರಿಶೀಲಿಸಿ ವರದಿ ನೀಡಿ: ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ವಹಿಸಬೇಕು. ಇಒ, ಪಿಡಿಒ ಹಾಗೂ ಸಹಾಯಕ ಕಾರ್ಯಪಾಲಕ(ಎಇಇ) ಎಂಜಿನಿಯರ್‌ಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವಸ್ತುಸ್ಥಿತಿ ಅರಿಯಬೇಕು ಹಾಗೂ ಈ ಕುರಿತು ವರದಿ ಸಲ್ಲಿಸಬೇಕು. ಕೈಪಂಪು ದುರಸ್ತಿ, ಟ್ಯಾಂಕರ್ ನೀರು ಸರಬರಾಜು, ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಕೆ, ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಯುವುದು ಸೇರಿದಂತೆ ಇನ್ನಿತರೆ ಪರಿಹಾರೋಪಾಯ ಕ್ರಮಗಳನ್ನು ಅನುಸರಿಸುವ ಮೂಲಕ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಕೇಂದ್ರಸ್ಥಾನದಲ್ಲೇ ಇರಬೇಕು: ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ನೆಲೆಸಿ ಸಂಭವನೀಯ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಬೇಸಿಗೆ ಮುಗಿಯುವವರೆಗೆ ಯಾವುದೇ ಅಧಿಕಾರಿಗಳು ತುರ್ತು ಸಂದರ್ಭ ಹೊರತುಪಡಿಸಿ ರಜೆ ಪಡೆಯುವಂತಿಲ್ಲ ಎಂದು ಎಚ್ಚರಿಸಿದರು.
325 ಲಕ್ಷ ರೂ. ಅನುದಾನ: ಎಇಇ ಬಸವರಾಜು ಮಾತನಾಡಿ, ಮಂಡ್ಯ ಜಿಲ್ಲೆಗೆ ಸರ್ಕಾರದಿಂದ ಟಾಸ್ಕ್ ಪೋರ್ಸ್ 3ನೇ ಹಂತದಲ್ಲಿ 325 ಲಕ್ಷ ರೂ. ಅನುದಾನ ಹಂಚಿಕೆಯಾಗಿದೆ. 160 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು ಹೇಳಿದರು.
ನೈರ್ಮಲ್ಯಕ್ಕೆ ಒತ್ತು ನೀಡಿ: ಬೇಸಿಗೆ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಕಿರು ನೀರು ಸರಬರಾಜು ಸ್ಥಾವರಗಳು, ಓವರ್ ಹೆಡ್ ಟ್ಯಾಂಕ್‌ಗಳನ್ನು ಶುಚಿಗೊಳಿ ಸುವುದು, ಪೈಪ್‌ಲೈನ್‌ಗಳಲ್ಲಿ ನೀರು ಸೋರಿಕೆ ಆಗದಂತೆ ದುರಸ್ತಿಗೊಳಿಸುವುದು, ಚರಂಡಿಗಳನ್ನು ಶುಚಿಗೊಳಿಸುವ ಮೂಲಕ ನೈರ್ಮಲ್ಯ ಕಾಪಾಡಬೇಕು ಎಂದು ಪ್ರಭಾರ ಸಿಇಒ ಪ್ರಕಾಶ್ ಹೇಳಿದರು.