Advertisement
ಹೌದು. ನಗರಸಭೆ ವ್ಯಾಪ್ತಿಯಲ್ಲಿ ಬಡವರಿಗೆ ಸೂರು ಕಲ್ಪಿಸಬೇಕೆಂದು ಈ ಹಿಂದೆ ಕೊಪ್ಪಳ ಶಾಸಕರಾಗಿದ್ದ ಸಂಗಣ್ಣ ಕರಡಿ ಅವರು ತಾಲೂಕಿನ ಹಿರೇಸಿಂದೋಗಿಯ ರಸ್ತೆಯಲ್ಲಿ 2000 ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳ ಹಂಚಿಕೆಗೆ ವ್ಯವಸ್ಥೆ ಮಾಡಿದ್ದರು. ಆದರೆ ರಾಜಕೀಯ ಕಾರಣಕ್ಕೆ, ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ದಶಕದಿಂದಲೂ ಫಲಾನುಭವಿಗಳಿಗೆ ಮನೆ, ನಿವೇಶನ ಹಂಚಿಕೆಯ ಆಗಿರಲಿಲ್ಲ. ಈಗ ಹಂಚಿಕೆ ಕೊನೆ ಹಂತ ತಲುಪುತ್ತಿದೆ.
Related Articles
Advertisement
ಈಗ ನಗರಸಭೆ, ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶದ ಸಹಯೋಗದಲ್ಲಿ ಅಧಿಕಾರಿಗಳ ಶ್ರಮ ಹಾಗೂ ಜನಪ್ರತಿನಿಧಿಗಳ ನಿರಂತರ ಪ್ರಯತ್ನದಿಂದ ಪ್ರಸ್ತುತ ಹಿರೇಸಿಂದೋಗಿ ರಸ್ತೆಯಲ್ಲಿ ಸದ್ಯ ಯಾವ ಸ್ಥಿತಿಯಲ್ಲಿ ಮನೆಗಳು ನಿರ್ಮಾಣವಾಗಿವೆಯೋ ಅದೇ ಸ್ಥಿತಿಯಲ್ಲೇ ಹಂಚಿಕೆಯಾಗಿರುವ ಮನೆಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲು ನಗರಾಭಿವೃದ್ಧಿ ಕೋಶವು ನಿರ್ಧರಿಸಿದೆ. ಈ ಹಿಂದೆ ನಗರಸಭೆಯ ಸಾಮಾನ್ಯ ಸಭೆಯಲ್ಲೂ ಇದು ಸದ್ದು ಮಾಡಿ ಮನೆ ಹಂಚಿಕೆಗೆ ಒತ್ತಾಯವೂ ಕೇಳಿ ಬಂದಿದ್ದವು.
ಪ್ರಸ್ತುತ 2000 ಮನೆಗಳ ಜಮೀನನ್ನು ಜಿಲ್ಲಾಡಳಿತವೇ ಕೆಜೆಪಿ ಮಾಡಿ ಸರ್ಕಾರದ ದಾಖಲೆಗಳ ಪ್ರಕಾರ ಲೆಔಟ್ ಸಿದ್ಧಪಡಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಸಿದ್ಧತೆಯಲ್ಲಿ ತೊಡಗಿದೆ. 2000 ಮನೆಗಳ ಪೈಕಿ ಮೊದಲ ಹಂತದಲ್ಲಿ 1600 ಮನೆ ಅಥವಾ ನಿವೇಶನಗಳ ಹಂಚಿಕೆಗೆ ಯೋಜಿಸಿದೆ. ಇದರಿಂದಾಗಿ ಅರ್ಜಿ ಸಲ್ಲಿಸಿ ಫಲಾನುಭವಿಯಾಗಿ ಆಯ್ಕೆಯಾಗಿರುವ ಜನತೆಗೆ ಎಲ್ಲಿಲ್ಲದ ಖುಷಿ ತರಿಸಿದೆ. ಕೊನೆಗೂ 10 ವರ್ಷಗಳ ಹೋರಾಟದ ಫಲವಾಗಿ ನಮ್ಮ ಕನಸಿನ ಗೂಡು ಕೈ ಸೇರಲಿದೆ ಎನ್ನುವ ಆಸೆ ಚಿಗುರಿದೆ.
ನಗರಸಭೆ ವ್ಯಾಪ್ತಿಯ ಹಿರೇಸಿಂದೋಗಿ ರಸ್ತೆಯಲ್ಲಿನ 2000 ಮನೆಗಳ ಹಕ್ಕುಪತ್ರಗಳ ಹಂಚಿಕೆ ಪ್ರಕ್ರಿಯೆ ಇನ್ನು 15 ದಿನಗಳಲ್ಲೇ ನಡೆಯಲಿದೆ. ಮೊದಲು 1600 ಹಕ್ಕುಪತ್ರ ವಿತರಣೆ ಮಾಡಲಿದ್ದೇವೆ. ಈಗಿರುವ ಸ್ಥಿತಿಯಲ್ಲೇ ಅವುಗಳ ಹಂಚಿಕೆ ನಡೆಯಲಿದೆ. ಕೆಲವೊಂದು ವ್ಯಾಜ್ಯ ಕೋರ್ಟ್ ಹಂತದಲ್ಲಿವೆ. ಜಿಲ್ಲಾಡಳಿತದ ನಿರಂತರ ಪ್ರಯತ್ನದ ಫಲವಾಗಿ ಆಶ್ರಯ ಪ್ಲಾಟಿನ ಎಲ್ಲ ಸಮಸ್ಯೆ ಇತ್ಯರ್ಥವಾಗಿದೆ. ಶೀರ್ಘ ಫಲಾನುಭವಿಗಳ ಕೈಗೆ ಹಕ್ಕುಪತ್ರ ಸೇರಲಿದೆ. ಗಂಗಪ್ಪ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ, ಕೊಪ್ಪಳ
-ದತ್ತು ಕಮ್ಮಾರ