Advertisement
ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಅಧಿಕಾರಿಗಳ ಜತೆ ಸಭೆ ನಡೆಸಿದ ಅನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಇಲ್ಲಿ ಹೆಸರಿಗೆ ಮಾತ್ರ ಸರಕಾರಿ ಎಂಬುದಾಗಿ ಇದೆ; ನಿಯಂತ್ರಣ ಖಾಸಗಿಯವರದ್ದೇ ಆಗಿದೆ. ಇಲ್ಲಿ ಒಂದು ಸರಕಾರಿ ಯುನಿಟ್ ಕೂಡ ಆರಂಭಿಸುವಂತೆ ಮನವಿ ಇದ್ದು, ಪರಿಗಣಿಸುವ ಬಗ್ಗೆ ಬೆಂಗಳೂರಿನಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸಚಿವರು ತಿಳಿಸಿದರು.
“ಲೆವೆಲ್ 3 ವರೆಗಿನ ಚಿಕಿತ್ಸೆಗಳನ್ನು ಇಲ್ಲಿ ಇತ್ತೀಚಿನ ವರೆಗೂ ನೀಡುತ್ತಿರಲಿಲ್ಲ. ನಾವು ಒತ್ತಾಯಿಸಿದ ಅನಂತರ ನೀಡಲಾಗುತ್ತಿದೆ. ಇಲ್ಲದಿದ್ದರೆ ಬೇರೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಇಲ್ಲಿ ಸರಕಾರದ ಯಾವುದೇ ಅಧಿಕಾರಿ, ಸಿಬಂದಿ ಇಲ್ಲದಿರುವುದರಿಂದ ಜನಪ್ರತಿನಿಧಿಗಳಿಗೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಹಾಗಾಗಿ ಇಲ್ಲಿರುವ ಖಾಸಗಿಯ 2 ಯುನಿಟ್ ಜತೆಗೆ 1 ಸರಕಾರದ ಯುನಿಟ್ ಆರಂಭಿಸಬೇಕು. ಇಂತಹ ವ್ಯವಸ್ಥೆ ಮಂಗಳೂರಿನ ಲೇಡಿಗೋಷನ್‌ನಲ್ಲಿ ಇದ್ದು ಉತ್ತಮವಾಗಿ ನಡೆಯುತ್ತಿದೆ’ ಎಂದು ಶಾಸಕ ರಘುಪತಿ ಭಟ್ ಹೇಳಿದರು. “ಇಲ್ಲಿ ಕೆಲವೊಂದು ಚಿಕಿತ್ಸೆ ಸದ್ಯಕ್ಕಿಲ್ಲ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಂದರ್ಭಗಳಿದ್ದರೆ ಉತ್ತಮ ಸೌಲಭ್ಯ ಇರುವ ಆಸ್ಪತ್ರೆಗೆ ರೆಫರ್ ಮಾಡುತ್ತೇವೆ’ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು. ಶಾಸಕ ಕೆ. ರಘುಪತಿ ಭಟ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಡಿಎಚ್‌ಒ ಡಾ| ಅಶೋಕ್, ಜಿಲ್ಲಾ ಸರ್ಜನ್ ಡಾ| ಮಧುಸೂದನ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.
Related Articles
3ಎ ರೆಫರಲ್ ಪಡೆಯುವ ನಿಯಮ ರದ್ದು
Advertisement
ಉಡುಪಿ: ಆಯುಷ್ಮಾನ್ ಯೋಜನೆಯಡಿ 3ಎ ಲೆವೆಲ್ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆ ಯಿಂದ ರೆಫರಲ್ (ವರದಿ) ಪಡೆಯುವ ನಿಯಮವನ್ನು ರದ್ದು ಪಡಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು,“ಆಯುಷ್ಮಾನ್ ಯೋಜನೆಯಡಿ ಯಾವುದೇ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೊದಲು ಸರಕಾರಿ ಆಸ್ಪತ್ರೆಯಿಂದ ವರದಿ (ರೆಫರಲ್) ಪಡೆಯಬೇಕೆಂಬ ನಿಯಮದಿಂದ ತೀವ್ರ ಸಮಸ್ಯೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳು ವಿಲೀನಗೊಂಡಿರುವುದರಿಂದ ಈ ತೊಂದರೆ ಯಾಗಿದೆ. ಹಾಗಾಗಿ ಕೆಲವು ಕಾಯಿಲೆಗಳಿಗೆ ರೆಫರಲ್‌ನಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ ಕ್ಯಾನ್ಸರ್, ಹೃದ್ರೋಗ, ಮೂತ್ರಕೋಶ, ನರರೋಗಕ್ಕೆ ಸಂಬಂಧಿಸಿದ ಕಾಯಿಲೆಗಳು ಸೇರಿವೆ. ಈ ಬಗ್ಗೆ ಶೀಘ್ರದಲ್ಲೇ ಸರಕಾರಿ ಆದೇಶ ಹೊರಡಿಸಲಾಗುವುದು’ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು “ಖಾತೆ ಹಂಚಿಕೆ ಕುರಿತು ಯಾವುದೇ ಗೊಂದಲವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಇದು ನಮಗೆ ಸೇವೆ ಮಾಡಲು ದೊರೆತಿರುವ ಅವಕಾಶ. ಏನಾದರೂ ಗೊಂದಲವಿದ್ದರೆ ಮುಖ್ಯಮಂತ್ರಿಗಳ ಜತೆಗೆ ಖುದ್ದಾಗಿ ಮಾತನಾಡುತ್ತೇನೆ. ಮಾಧ್ಯಮಗಳಿಗೆ ಹೇಳಿಕೆ ನೀಡುವುದಿಲ್ಲ. ಪಕ್ಷವನ್ನು ನಳಿನ್ ಹಾಗೂ ಸರಕಾರವನ್ನು ಯಡಿಯೂರಪ್ಪ ಮುನ್ನಡೆಸುತ್ತಾರೆ’ ಎಂದು ತಿಳಿಸಿದರು. ವೈದ್ಯರ ಶೀಘ್ರ ಭರ್ತಿ
ಶ್ರೀರಾಮುಲು ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಅನೇಕ ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆಯಿದ್ದು, ಶಾಸಕರು ಕೂಡ ಮನವಿ ಸಲ್ಲಿಸಿದ್ದಾರೆ. ನೇರ ನೇಮಕಾತಿ ಮೂಲಕ ಶೀಘ್ರ ಭರ್ತಿ ಮಾಡಲಾಗುವುದು. ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಇಲ್ಲಿನ ವೈದ್ಯರ ಭ್ರಷ್ಟಾಚಾರ ಆರೋಪದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.