ರಾಮನಗರ: ಕುಂಟುತ್ತ, ತೆವಳುತ್ತ ಸಾಗಿದ್ದ ಶ್ರೀರಂಗ ಯೋಜನೆಗೆ ಚರುಕು ನೀಡಲು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಮನಸ್ಸು ಮಾಡಿದ್ದಾರೆ. ಶ್ರೀರಂಗ ಏತ ನೀರಾವರಿ ಯೋಜನೆ ಪ್ರಗತಿ ಕುರಿತಂತೆ ಬೆಂಗಳೂರಿನಲ್ಲಿ ಶುಕ್ರವಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಭೆ ನಡೆಸಿದ್ದಾರೆ. ವರ್ಷದಲ್ಲಿ ಕಾಮಗಾರಿ ಪೂರ್ಣ ಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀರಂಗ ಯೋಜನೆಯ 324.67 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಮುಂದಿನ ಸಚಿವ ಸಂಪುಟ ಸಭೆ ಯಲ್ಲಿ ಒಪ್ಪಿಗೆ ಪಡೆಯುವುದಾಗಿ ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕುಗಳ 277 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಶ್ರೀರಂಗ ಏತ ನೀರಾವರಿ ಯೋಜನೆಯ ಪ್ರಗತಿ ಕುರಿತಂತೆ ಬೆಂಗಳೂರಿನಲ್ಲಿ ಶುಕ್ರವಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಾ.ಸಿ.ಎನ್.ಅಶ್ವತ್ಥನಾರಾ ಯಣ, 2014ರಿಂದ ಕುಂಟುತ್ತಾ ಸಾಗಿರುವ ಈ ಕಾಮಗಾರಿ ಚುರುಕುಗೊಳಿಸಬೇಕು ಎಂದು ಕಟ್ಟಾಜ್ಞೆ ಮಾಡಿದ್ದಾರೆ.
ಮಾಗಡಿ ತಾಲೂಕಿನ 211 ಹಳ್ಳಿಗಳು, ಕುಣಿಗಲ್ ತಾಲೂಕಿನ 66 ಹಳ್ಳಿಗಳಿಗೆ ಕುಡಿ ಯುವ ನೀರು ಒದಗಿಸಲಾಗುತ್ತದೆ. ಇದರಿಂ ದಾಗಿ ಮಾಗಡಿಯ 66 ಕೆರೆಗಳು, ಕುಣಿಗಲ್‌ನ 17 ಕೆರೆಗಳನ್ನು ತುಂಬಿಸಲು ಹೇಮಾವತಿ ನದಿಯಿಂದ ಏತ ನೀರಾವರಿ ಮೂಲಕ ಹರಿಸುವ 277.5 ಕೋಟಿ ರೂ. ವೆಚ್ಚದ ಯೋಜನೆಯನ್ನು 2014ರಲ್ಲಿ ಆರಂಭಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಕಾಮ ಗಾರಿ ಅರ್ಧಕ್ಕೆ ನಿಂತಿತ್ತು. ತದ ನಂತರ 2017ರಲ್ಲಿ ಈ ಯೋಜನೆಗೆ ಮತ್ತೆ ಚಾಲನೆ ದೊರಕಿತ್ತು. ಇಲ್ಲಿಯವರೆಗೆ ಸುಮಾರು 163.38 ಕೋಟಿ ರೂ. ವೆಚ್ಚದ ಕಾಮಗಾರಿ ಆಗಿದೆ.
ಯೋಜನಾ ವೆಚ್ಚದಲ್ಲಿ ಏರಿಕೆ ಏಕೆ?: ಭೂಸ್ವಾಧೀನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುವುದನ್ನು ತಪ್ಪಿಸಲು 277 ಕಿ. ಮೀ. ಉದ್ದದ ರಸ್ತೆ ಬದಿ ಗ್ರಾವಿಟಿ ಮೈನ್ ಪೈಪ್ ಅಳವಡಿಸಲು ನಿರ್ಧರಿಸಿದ್ದರಿಂದ ಯೋಜನೆಗೆ 53.42 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಾಗಿದ್ದು, ಯೋಜನಾ ವೆಚ್ಚ 324.67 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸಚಿವರು, ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಭೂಸ್ವಾಧೀನ ತ್ವರಿತಗೊಳಿಸಲು ಸೂಚನೆ: ಯೋಜನೆಗೆ ಜಿಲ್ಲೆಯಲ್ಲಿ 57 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, 14 ಎಕರೆ, 24 ಗುಂಟೆ ಜಮೀನನ್ನು ನೇರ ಖರೀದಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಅಶ್ವತ್ಥ ನಾರಾಯಣ, ರಾಮನಗರ ಮತ್ತು ತುಮ ಕೂರು ಜಿಲ್ಲೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಇದಕ್ಕೆ ಇರುವ ತೊಡಕುಗಳನ್ನು ತಕ್ಷಣವೇ ಬಗೆಹರಿಸಿ ಅಗತ್ಯ ಭೂಮಿ ಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಮಾಗಡಿ ಶಾಸಕ ಮಂಜುನಾಥ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.