Advertisement

ಬರದ ನಾಡಿಗೆ ಶೀಘ್ರ ನೀರಾವರಿ ಸೌಲಭ್ಯ: ನಾರಾಯಣಸ್ವಾಮಿ

03:14 PM Mar 21, 2022 | Team Udayavani |

ಚಳ್ಳಕೆರೆ: ಬರದ ನಾಡಿನ ಬಯಲುಸೀಮೆಯಲ್ಲಿ ನೆಲೆಸಿರುವ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಕೃಪಾಕಟಾಕ್ಷದಿಂದ ಈ ನಾಡು ಉತ್ತಮ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಈ ಭಾಗದ ಬಹುತೇಕ ಪ್ರದೇಶಗಳಿಗೆ ಶೀಘ್ರದಲ್ಲಿ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಭಾನುವಾರ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಅವರು ಮಾತನಾಡಿದರು. ಸ್ವಾಮಿಯ ಕೃಪೆಯಿಂದ ಕೊರೊನಾ ಕಂಟಕ ಈ ನಾಡಿನನಿಂದ ದೂರ ಸರಿದಿದೆ. ಕಳೆದ ಹಲವಾರು ದಶಕಗಳಿಂದ ಗುರು ತಿಪ್ಪೇರುದ್ರಸ್ವಾಮಿ ತನ್ನ ಭಕ್ತರಿಗೆ ಯಾವುದೇ ಸಂಕಷ್ಟಗಳು ಎದುರಾಗದಂತೆ ಸಂರಕ್ಷಣೆ ಮಾಡಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ. ಈ ಬಾರಿಯ ಜಾತ್ರೆಗೆ ನಿರೀಕ್ಷೆಗೂ ಮೀರಿ ಭಕ್ತರು ಉತ್ಸಾಹದಿಂದ ಆಗಮಿಸಿದ್ದಾರೆ ಎಂದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಭಕ್ತರಲ್ಲಿ ಸ್ವಾಮಿಯ ಬಗ್ಗೆ ಅಪಾರವಾದ ನಂಬಿಕೆ, ವಿಶ್ವಾಸ, ಶ್ರದ್ಧೆ ಹೆಚ್ಚಾಗಿದೆ. ದೇವರ ಕಾರ್ಯವನ್ನು ಮಾಡಲು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಜಿಲ್ಲಾಡಳಿತ ಇಲ್ಲಿಗೆ ಆಗಮಿಸಿರುವ ಭಕ್ತರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಫಲವಾಗಿದೆ ಎಂದು ತಿಳಿಸಿದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ನಾಯಕನಹಟ್ಟಿ ಪಟ್ಟಣ ಸ್ವಾಮಿಯ ಭಕ್ತರಿಂದ ತುಂಬಿ ಹೋಗಿದೆ. ಎಲ್ಲಿ ನೋಡಿದರೂ ಸಾಗರೋಪಾದಿಯಲ್ಲಿ ಭಕ್ತರು ಜಮಾಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪೊಲೀಸ್‌ ಇಲಾಖೆ ಪ್ರಾಣಿ ಬಲಿ ನಿಷೇಧದ ಬಗ್ಗೆ ಧ್ವನಿವರ್ಧಕದ ಮೂಲಕ ಭಕ್ತರಿಗೆ ಮನವರಿಕೆ ಮಾಡಿಕೊಡುತ್ತಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಓಡಾಟಕ್ಕೆ ಸಾಕಷ್ಟು ಬಸ್‌ಗಳ ವ್ಯವಸ್ಥೆ ಮಾಡಿತ್ತು. ಜಾತ್ರೆಗೆ ಹೋಗುವ ಭಕ್ತರಿಗೆ ನಗರದ ನೆಹರೂ ವೃತ್ತದಲ್ಲಿ ಸ್ವಾಮಿಯ ಭಕ್ತರಾದ ಟಿ.ಎನ್‌. ರುದ್ರಣ್ಣ, ಎಸ್‌. ರೇವಣ್ಣ, ನಾಗರಾಜ, ಸುರೇಶ್‌ ಮುಂತಾದವರು ಉಚಿತ ಮಜ್ಜಿಗೆ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next