Advertisement

ಶೀಘ್ರ ಹೆದ್ದಾರಿ ಕಾಮಗಾರಿ ಆರಂಭ

09:57 AM Dec 13, 2018 | Team Udayavani |

ಮಹಾನಗರ: ನಗರದ ಪಡೀಲ್‌ನ ರಾ.ಹೆ. 75ರಲ್ಲಿ ಈಗಾಗಲೇ ನಿರ್ಮಾಣವಾಗಿರುವ ಹೊಸ ರೈಲ್ವೇ ಕೆಳಸೇತುವೆಯ ಪಕ್ಕದಲ್ಲೇ ಇರುವ ಹಳೆಯ ಅಂಡರ್‌ಪಾಸ್‌ ಅನ್ನು ಸುಸಜ್ಜಿತ ರೀತಿಯಲ್ಲಿ ರೈಲ್ವೇ ಇಲಾಖೆ ಮೇಲ್ದರ್ಜೆಗೇರಿಸಿದ್ದು, ಇದರ ಬಹುತೇಕ ಕಾಮಗಾರಿ ಪೂರ್ಣವಾಗಿದೆ. ಮುಂದೆ ಅಂಡರ್‌ಪಾಸ್‌ಗೆ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಡೆಸಬೇಕಿದೆ.

Advertisement

ಪಡೀಲಿನಲ್ಲಿ 16.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 5.50 ಮೀಟರ್‌ ಎತ್ತರದ 62 ಮೀ. ಉದ್ದದ ಹೊಸ ಕೆಳಸೇತುವೆಯನ್ನು ಕಳೆದ ವರ್ಷ ನ. 15ಕ್ಕೆ ಉದ್ಘಾಟಿಸಲಾಗಿತ್ತು. ಆ ಬಳಿಕ ಪಕ್ಕದಲ್ಲಿರುವ ಹಳೆ ರೈಲ್ವೇ ಅಂಡರ್‌ಪಾಸ್‌ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 6 ಕೋ.ರೂ. ವೆಚ್ಚದಲ್ಲಿ ಇದರ ಕಾಮಗಾರಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಡೀಲಿನಲ್ಲಿ ನಿರ್ಮಾಣವಾಗಿದ್ದ ಹೊಸ ಸೇತುವೆಯ ಎತ್ತರದ ಕುರಿತು ಹಲವು ಆರೋಪಗಳು ಈ ಮೊದಲು ಕೇಳಿಬಂದಿದ್ದರೂ ಈಗ ಎಲ್ಲ ವಾಹನಗಳೂ ಸರಾಗವಾಗಿ ಇಲ್ಲಿ ಸಂಚರಿಸುತ್ತಿವೆ. ಇಂಡಿಯನ್‌ ರೋಡ್ಸ್‌ ಕಾಂಗ್ರೆಸ್‌(ಐಆರ್‌ಸಿ) ನಿಯಮದಂತೆ 5.50 ಮೀ. ಎತ್ತರದಲ್ಲಿ ಹಾಗೂ 12.50 ಮೀ. ಅಗಲದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆರ್‌ಟಿಒ ನಿಯಮದಂತೆ ಕಂಟೈನರ್‌ ಸಹಿತ ಒಂದು ವಾಹನವು ಗರಿಷ್ಠ 4.8 ಮೀ.ಎತ್ತರವನ್ನು ಮಾತ್ರ ಹೊಂದಿರಬಹುದಾಗಿದೆ. ಇದೇ ರೀತಿಯಲ್ಲಿ ಹಳೆಯ ಅಂಡರ್‌ಪಾಸ್‌ ಕೂಡ ಈಗ ನಿರ್ಮಾಣವಾಗಿದೆ. 5.50 ಮೀ. ಎತ್ತರವಿದ್ದು, ಅಗಲ ಹೊಸ ಅಂಡರ್‌ ಪಾಸ್‌ಗಿಂತ ಅಧಿಕವಿದೆ.

ಸುರಂಗದ ಒಳಗೆ ಬಾಕ್ಸ್‌ ಮಾದರಿ
ವಾಹನ ಸಂಚಾರಕ್ಕೆ ಮುಕ್ತಗೊಂಡ ಪಡೀಲ್‌ನ ಹೊಸ ಅಂಡರ್‌ಪಾಸ್‌ ಕಾಮಗಾರಿಯನ್ನು ಮೇಲ್ಗಡೆ ರೈಲು ಸಂಚರಿಸುತ್ತಿರುವಾಗಲೇ ನಿರ್ಮಿಸಲಾಗಿತ್ತು. ಹೈಡ್ರಾಲಿಕ್‌ ತಂತ್ರಜ್ಞಾನವನ್ನು ಬಳಸಿ ಒಂದರ ಹಿಂದೆ ಒಂದರಂತೆ ಬಾಕ್ಸ್‌ ಗಳನ್ನು ಪುಶ್‌ ಮಾಡಿ ಸುರಂಗ ನಿರ್ಮಿಸಲಾಗಿತ್ತು. ಆದರೆ, ಈಗಾಗಲೇ ಮಾಡಿರುವ ಹಳೆ ಸೇತುವೆ ಕಾಮಗಾರಿ ತ್ರಾಸದಾಯಕವಾಗಿರಲಿಲ್ಲ. 

ಯಾಕೆಂದರೆ, ಈಗಾಗಲೇ ಸುರಂಗ ಇದ್ದ ಕಾರಣದಿಂದ ಮಣ್ಣು ಕೊರೆಯುವ ಪ್ರಮೇಯ ಎದುರಾಗಿರಲಿಲ್ಲ. ಬದಲಾಗಿ, ಸುರಂಗದ ಒಳಗಡೆ ಕಾಂಕ್ರೀಟ್‌ ಹಾಕಿ ಬಾಕ್ಸ್‌ ಮಾದರಿಯಲ್ಲಿ ಸೇತುವೆ ಕಾಮಗಾರಿ ನಡೆಸಲಾಗಿತ್ತು.

Advertisement

ಮಳೆಯದ್ದೇ ಇಲ್ಲಿ ಟೆನ್ಶನ್‌
ಹಳೆಯ ರೈಲ್ವೇ ಅಂಡರ್‌ ಪಾಸ್‌ ಪ್ರದೇಶವು ತಗ್ಗು ಪ್ರದೇಶವಾದ್ದರಿಂದ ಪ್ರತೀ ಮಳೆಗಾಲದ ಸಂದರ್ಭ ಇಲ್ಲಿ ಮಳೆ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಜತೆಗೆ ಪಕ್ಕದ ಮನೆಗಳಿಗೆ ಹಾಗೂ ಹೆದ್ದಾರಿಯಲ್ಲೂ ಕೃತಕ ನೆರೆ ಸೃಷ್ಟಿಯಾಗುತ್ತಿತ್ತು. ಹೀಗಾಗಿಯೇ ಮಳೆಗಾಲದ ವೇಳೆಯಲ್ಲಿ ಹಳೆಯ ಅಂಡರ್‌ಪಾಸ್‌ ಸಮಸ್ಯೆಯ ಆಗರವಾಗಿತ್ತು. ಇದನ್ನು ಮನಗಂಡು ಇದೀಗ ನೂತನವಾಗಿ ನಿರ್ಮಿಸಲಾದ ಅಂಡರ್‌ಪಾಸ್‌ ಅನ್ನು ತುಸು ಮೇಲಕ್ಕೇರಿಸಲಾಗಿದೆ. ಹೆದ್ದಾರಿಯನ್ನು 1.5 ಮೀ.ನಿಂದ 1.8 ಮೀ.ಗೆ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಇದರಂತೆ ರೈಲ್ವೇ ಅಂಡರ್‌ಪಾಸ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಹೊಸ ಅಂಡರ್‌ಪಾಸ್‌ ಉದ್ಘಾಟನೆ ಆದ ಬಳಿಕ ಬಂದ ಮೊದಲ ಮಳೆಗೆ ನೀರು ಹರಿಯಲು ಸಾಧ್ಯವಾಗದೆ ಅಂಡರ್‌ಪಾಸ್‌ ಪೂರ್ಣ ನೆರೆ ನೀರು ನಿಂತ ದೃಶ್ಯ ಕಣ್ಣಮುಂದಿರುವಾಗ, ಹಳೆಯ ಅಂಡರ್‌ಪಾಸ್‌ನಲ್ಲಿ ನೆರೆನೀರು ಸಮಸ್ಯೆ ಸೃಷ್ಟಿಯಾಗದಂತೆ ರೈಲ್ವೇ ಇಲಾಖೆ ಎಚ್ಚರಿಕೆ ವಹಿಸಬೇಕಿದೆ.

ರೈಲ್ವೇ ವರ್ಸಸ್‌ ಹೆದ್ದಾರಿ
ರೈಲ್ವೇ ಮೂಲಗಳು ತಿಳಿಸುವ ಪ್ರಕಾರ ಅಂಡರ್‌ಪಾಸ್‌ ಪಕ್ಕದಲ್ಲಿ ಡ್ರೈನೇಜ್‌, ತೋಡಿನ ಕೆಲಸ, ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಬೇಕಿದ್ದು, ಅವರಿಗೆ ಈ ಬಗ್ಗೆ ಪೂರ್ಣ ವಿವರ ಒದಗಿಸಲಾಗಿದೆ ಎನ್ನುತ್ತಾರೆ. ಆದರೆ, ಹೆದ್ದಾರಿ ಇಲಾಖೆಯವರನ್ನು ಈ ಬಗ್ಗೆ ವಿಚಾರಿಸಿದಾಗ, ರೈಲ್ವೇಯಿಂದ ಡ್ರೈನೇಜ್‌ ಕೆಲಸ, ಮರ ತೆರವು, ವಿದ್ಯುತ್‌ ಕಂಬಗಳ ತೆರವು ಕಾರ್ಯಗಳನ್ನು ರೈಲ್ವೇ ಇಲಾಖೆ ನಡೆಸಿಕೊಡಬೇಕು. ಈ ಬಗ್ಗೆ ಪತ್ರ ಬರೆಯಲಾಗಿದ್ದು, ರೈಲ್ವೇಯವರು ಕಾಮಗಾರಿ ಪೂರ್ಣಗೊಳಿಸಿದ ಅನಂತರ ರಸ್ತೆ ಕಾಮಗಾರಿಯನ್ನು ಹೆದ್ದಾರಿ ಇಲಾಖೆ ನಡೆಸಲಿದೆ ಎನ್ನುತ್ತಾರೆ. ರೈಲ್ವೇ ಹಾಗೂ ಹೆದ್ದಾರಿ ಇಲಾಖೆ ಈ ಬಗ್ಗೆ ಪತ್ರ ವ್ಯವಹಾರ ನಡೆಸುತ್ತಿದ್ದು, ಈ ವಿಷಯ ಇತ್ಯರ್ಥಕ್ಕೆ ಇನ್ನೆಷ್ಟು ದಿನ ಕಾಯಬೇಕು ಎಂಬ ಪ್ರಶ್ನೆ ಈಗ ಎದುರಾಗಿದೆ. ಪ್ರತಿಷ್ಠಿತ ಎರಡು ಇಲಾಖೆಯವರು ಈ ಕುರಿತಂತೆ ಜತೆಯಾಗಿ ಮುನ್ನಡೆದರೆ ಹಳೆಯ ಅಂಡರ್‌ಪಾಸ್‌ನಲ್ಲಿ ಶೀಘ್ರದಲ್ಲಿ ಪ್ರಯಾಣಕ್ಕೆ ಮುಕ್ತವಾಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಬ್ರಿಡ್ಜ್ ಕಾಮಗಾರಿ ಪೂರ್ಣ
ಪಡೀಲ್‌ ರೈಲ್ವೇ ಬ್ರಿಡ್ಜ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬ್ರಿಡ್ಜ್ ಸಮೀಪ ತಡೆಗೋಡೆ ನಿರ್ಮಿಸಲಾಗಿದೆ. ಸಂಪರ್ಕ ರಸ್ತೆಯ ಎರಡೂ ಭಾಗದಲ್ಲಿ ಮಣ್ಣು ಹಾಕಿ ಪೂರಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿ ರಾ.ಹೆ. ಪ್ರಾಧಿಕಾರದವರು ರಸ್ತೆ ನಿರ್ಮಿಸಬೇಕಾಗಿದೆ. ಬ್ರಿಡ್ಜ್ ನ ಒಳಗೆ ಫುಟ್‌ಪಾತ್‌ ಕಾಮಗಾರಿ ಮುಂದಿನ 10 ದಿನದೊಳಗೆ ಪ್ರಾರಂಭವಾಗಲಿದೆ.
– ಜಯಶೀನನ್‌,
ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌
ಎಂಜಿನಿಯರ್‌, ರೈಲ್ವೇ ಇಲಾಖೆ 

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next