Advertisement

ಜಿಲ್ಲಾಸ್ಪತ್ರೆಯಲ್ಲಿ ಶೀಘ್ರ ಹೈಟೆಕ್‌ ಸೇವೆ

12:57 PM Aug 16, 2017 | |

ಧಾರವಾಡ: ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ಇನ್ನು ಮೂರು ತಿಂಗಳಲ್ಲಿ ಸಿಟಿ ಸ್ಕ್ಯಾನ್‌, ಎಂ.ಆರ್‌.ಐ. ಸ್ಕ್ಯಾನ್‌ ಸೇರಿದಂತೆ ಎಲ್ಲ ಹೈಟೆಕ್‌ ವೈದ್ಯಕೀಯ ಸೇವೆಗಳು ಇನ್ನು ಮೂರು ತಿಂಗಳಲ್ಲಿ ಜನರಿಗೆ ಲಭ್ಯವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. 

Advertisement

ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ 71ನೇ ಸ್ವಾತಂತ್ರೊತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇಲ್ಲಿನ ಸಿವಿಲ್‌ ಆಸ್ಪತ್ರೆ ಬಡವರಿಗಾಗಿ ಇರುವಂತದ್ದಾಗಿದ್ದು, ಇದರಲ್ಲಿ ಅನೇಕ ಸೌಲಭ್ಯಗಳನ್ನು ಈಗಾಗಲೇ ನೀಡಲಾಗಿದೆ. ಇದರ ಜೊತೆಗೆ ನ್ಯೂವಾರ್ಡ ಬ್ಲಾಕ್‌, ಐಸೋಲೇಷನ್‌ ಜಿ.ಇ. ವಾರ್ಡ, ಕಿಚನ್‌ ಬ್ಲಾಕ್‌, ಸರ್ಜಿಕಲ್‌ ವಾರ್ಡ, ಮೆಡಿಕಲ್‌ ಮತ್ತು ಪೀಡಿಯಾಟ್ರಿಕ್‌ ವಾರ್ಡುಗಳ ನವೀಕರಣ ಕಾರ್ಯ ಪೂರ್ಣಗೊಂಡಿದೆ.

ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಸಿ.ಟಿ. ಸ್ಕ್ಯಾನ್‌ ಮತ್ತು ಎಂ.ಆರ್‌.ಐ. ಸ್ಕ್ಯಾನ್‌ ಸೆಂಟರ್‌ ಗಳನ್ನು ಹಾಗೂ ರಕ್ತಕೋಶ ವಿಂಗಡಣಾ ಘಟಕವನ್ನು ಸ್ಥಾಪಿಸಿದ್ದು, ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕರಿಗೆ ಎಲ್ಲ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು. 

ಅಭಿವೃದ್ಧಿಯಲ್ಲೂ ಮುಂದೆ: ಜಿಲ್ಲೆಯಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ  ಕಾರ್ಯಗಳನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ ಸಚಿವ ವಿನಯ, ಧಾರವಾಡ ಜಿಲ್ಲೆಯಲ್ಲಿ 22,207 ರೈತರಿಗೆ 7996.87 ಲಕ್ಷ ರೂ.ಗಳ ಸಾಲಮನ್ನಾ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಕಳೆದ ಜೂನ್‌ 30ರ ವರೆಗೆ 1910 ರೈತರ 194.67 ಲಕ್ಷ ರೂಪಾಯಿ ಬಡ್ಡಿಯನ್ನೂ ಸಹ ಮನ್ನಾ ಮಾಡಲಾಗಿದೆ ಎಂದರು. 

ಜುಲೈ 2017ರವರೆಗೆ ಜಿಲ್ಲಾದ್ಯಂತ ಒಟ್ಟು 6797 ಕೃಷಿ ಹೊಂಡಗಳನ್ನು  ನಿರ್ಮಿಸಲಾಗಿದೆ. ಒಟ್ಟು 5710 ರೈತರಿಗೆ ಒಟ್ಟು 4373.4 ಲಕ್ಷ ರೂ.ಗಳ ಸಹಾಯಧನ ನೀಡಲಾಗಿದೆ. ಧಾರವಾಡ  ತಾಲೂಕಿನ ಐದು ಗ್ರಾಮಗಳಲ್ಲಿನ 9 ಕೆರೆಗಳಿಗೆ ತುಪ್ಪರಿಹಳ್ಳದ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 22.5 ಕೋಟಿ  ರೂ. ಮೀಸಲಿರಿಸಿದ್ದಾರೆ.

Advertisement

ಮುಂಬರುವ ದಿನಗಳಲ್ಲಿ ಹಂಗರಕಿ, ದುಬ್ಬನಮರಡಿ ಗ್ರಾಮಗಳೂ ಸೇರಿದಂತೆ ಕೆರೆಗಳಿರುವ ಊರುಗಳಲ್ಲಿನ ಸುಮಾರು 10 ಸಾವಿರ ಎಕರೆ ಭೂಮಿಗೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಇದೆ. ಅದೇ ರೀತಿ ಕಲಘಟಗಿ ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಬೇಡ್ತಿ ಹಳ್ಳದಿಂದ 35 ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ 125 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿರುವದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.  

ಸ್ವತ್ಛ ಭಾರತಕ್ಕೆ ಒತ್ತು: ಸ್ವತ್ಛ ಭಾರತ ಅಭಿಯಾನ ಕಾರ್ಯಕ್ರಮದಡಿ ಈ ವರ್ಷ 46,368 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 42 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿವೆ. ಬರುವ ಅಕ್ಟೋಬರ್‌ ಎರಡರೊಳಗಾಗಿ ಜಿಲ್ಲಾದ್ಯಂತ ಪ್ರತಿ ಮನೆಗಳಿಗೂ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ವಿನಯ್‌ ಹೇಳಿದರು. 

ಸರ್ಕಾರವು ಗ್ರಾಮೀಣ ಕುಡಿವ ನೀರು ಪೂರೈಕೆಗೆ ಹೆಚ್ಚು ಆದ್ಯತೆ ನೀಡಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಿಲ್ಲೆಗೆ 24.71 ಕೋಟಿ ರೂ.ಗಳ ಅನುದಾನ ದೊರೆತಿದೆ. ತುರ್ತು ಕುಡಿವ ನೀರು ಒದಗಿಸಲು ಸರ್ಕಾರವು ಟಾಸ್ಕ್ರ್ಸ್‌ ಅಡಿಯಲ್ಲಿ ಜಿಲ್ಲೆಗೆ  8.80 ಕೋಟಿ ರೂ. ಅನುದಾನ ನೀಡಿದೆ.

ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಲ್ಲ ಅರ್ಹ ಫಲಾನುಭವಿಗಳಿಗೆ ವರ ಬೇಡಿಕೆಗೆ ಅನುಸಾರ ಮನೆ ಮಂಜೂರು ಮಾಡಲಾಗುತ್ತಿದೆ. ಬಸವ ವಸತಿ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ.90ರಷ್ಟು ಹಾಗೂ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮನೆಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.  

ಸ್ಮಾರ್ಟ್‌-ಸಿಟಿಗೂ ಒತ್ತು: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌-ಸಿಟಿ ಯೋಜನೆಯಲ್ಲಿ ಎಸ್‌.ಪಿ.ವ್ಹಿ. ಸಂಸ್ಥೆಯನ್ನು ಆನ್‌-ಲೈನ್‌ ಮೂಲಕ ನೋಂದಾಯಿಸಲಾಗುತ್ತದೆ. ಈಗಾಗಲೇ ಪಾಲಿಕೆಯಿಂದ ಯೋಜನೆಯ ಮಾರ್ಗಸೂಚಿಯಂತೆ ಪೊಜೆಕ್ಟ್ ಮ್ಯಾನೇಜಮೆಂಟ್‌ ಕನ್ಸಲಟೆಂಟ್‌ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ. 

ಸ್ಮಾರ್ಟ್‌-ಸಿಟಿ ಯೋಜನೆಯಲ್ಲಿ 1,667 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು 5 ವರ್ಷಗಳಲ್ಲಿ ಅನುಷ್ಠಾನಗೊಳ್ಳುವ ಪ್ರಮುಖ ನಗರಾಭಿವೃದ್ಧಿ ಯೋಜನೆ ಆಗಿರುತ್ತದೆ. ಈ ದಿಸೆಯಲ್ಲಿ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ಒದಗಿಸಲಾಗುತ್ತದೆ.  

Advertisement

Udayavani is now on Telegram. Click here to join our channel and stay updated with the latest news.

Next