Advertisement

ಸಿದ್ಧಗಂಗಾ ಮಠಕ್ಕೆ ಶೀಘ್ರ ಹೇಮಾವತಿ ನೀರು

07:22 AM May 31, 2020 | Lakshmi GovindaRaj |

ತುಮಕೂರು: ಲಕ್ಷಾಂತರ ಭಕ್ತರ ಪವಿತ್ರ ಕ್ಷೇತ್ರ ಶ್ರೀ ಸಿದ್ಧಗಂಗಾ ಮಠಕ್ಕೆ ಹೇಮಾವತಿ ನೀರು ಕೊಡುವ ಬಹು ದಿನಗಳ ಬೇಡಿಕೆ ಈಗ ಈಡೇರುತ್ತಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಹೇಳಿದರು. ತಾಲೂಕಿನ ಊರ್ಡಿಗೆರೆ  ಹೋಬಳಿಯಲ್ಲಿ ಶನಿವಾರ ಕೊರೊನಾ ಲಾಕ್‌ ಡೌನ್‌ ನಿಂದ ಸಂಕಷ್ಟದಲ್ಲಿ ಇರುವ ಜನರಿಗೆ ಎರಡನೇ ಬಾರಿಗೆ ಕ್ಷೇತ್ರದ ಎಲ್ಲಾ 65 ಸಾವಿರ ಕುಟುಂಬಗಳಿಗೂ ದಿನಸಿ ಕಿಟ್‌ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಸಿದ್ಧಗಂಗಾ  ಮಠಕ್ಕೆ ನೀರನ್ನು ಬುಗುಡನಹಳ್ಳಿಯಿಂದ ದೇವರಾಯಪಟ್ಟಣದ ಮೂಲಕ ಮೈದಾಳ ಕೆರೆಗೆ ನೀರು ತರುವ ಯೋಜನೆ 2009-10ರಲ್ಲಿ ಟೆಂಡರ್‌ ಆದರೂ ಕೂಡ ಕಾಮಗಾರಿ ಪೂರ್ಣಗೊಳ್ಳದೇ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿತ್ತು. ಈಗ  ಮತ್ತೆ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಹೇಳಿದರು. ಬುಗುಡನಹಳ್ಳಿಯಿಂದ ಮಂಜೂರಾಗಿದ್ದ ಕಾಮಗಾರಿ ಯನ್ನು ರದ್ದುಗೊಳಿಸಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆ ಅಲ್ಲಿಂದ ಮೈದಾಳ ಕೆರೆಗೆ ನೀರು ಹರಿಸಿ,  ಮೈದಾಳ ಕೆರೆಯಿಂದ ಸಿದ್ಧಗಂಗಾ ಮಠಕ್ಕೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಹೊನ್ನೇನಹಳ್ಳಿ ಕೆರೆಯಿಂದ ಆರಂಭಗೊಂಡ ಕಾಮಗಾರಿಗೆ ಸಚಿವ ಜಗದೀಶ್‌ ಶೆಟ್ಟರ್‌ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದು,  ಇದರಿಂದ ಸಿದ್ಧಗಂಗಾ ಮಠಕ್ಕೆ ನೀರು ಹರಿಸುವ ಬಹು ದಿನಗಳ ಬೇಡಿಕೆ ಸದ್ಯದಲ್ಲೇ ಈಡೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎರಡನೇ ಬಾರಿಗೆ ದಿನಸಿಕಿಟ್‌ ವಿತರಿಸಲಾಗುತ್ತಿದೆ, ವಾರಕ್ಕೆ ಎರಡು ಪಂಚಾಯ್ತಿ, ತಿಂಗಳಿಗೆ 8  ಪಂಚಾಯ್ತಿಗಳಲ್ಲಿ ದಿನಸಿ ಕಿಟ್‌ ವಿತರಣೆ ಮಾಡುವ ಮೂಲಕ ಗ್ರಾಮಾಂತರ ಕ್ಷೇತ್ರದ ಎಲ್ಲಾ 35 ಗ್ರಾಮ ಪಂಚಾಯ್ತಿಗಳಲ್ಲೂ ಮತ್ತೆ ದಿನಸಿ ಕಿಟ್‌ಗಳನ್ನು ವಿತರಿಸುವುದಾಗಿ ತಿಳಿಸಿದರು.

ಬಸವಾಪಟ್ಟಣ ಬಸವಣ್ಣ ದೇವಾಲಯ ನಿರ್ಮಿಸಿಕೊಡು ವಂತೆ ಗ್ರಾಮಸ್ಥರು ಮನವಿ ಮಾಡಿದ  ಮೇರೆಗೆ ಮನವಿಗೆ ಸ್ಪಂದಿಸಿ ಶಾಸಕ ಡಿ.ಸಿ.ಗೌರಿಶಂಕರ್‌ ಬಸವಣ್ಣ ದೇವಾಲಯ ನಿರ್ಮಾಣ ಮಾಡಿಕೊಡುವ ಆಶ್ವಾಸನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next