Advertisement

ಜನತೆಯ ಹಿತದೃಷ್ಟಿಯಿ‌ಂದ ಶೀಘ್ರ ಕಡತ ವಿಲೇವಾರಿ ಮಾಡಿ: ಉಪಲೋಕಾಯುಕ್ತ ಬಿ.ಎಸ್‌.ಪಾಟೀಲ್

08:04 PM Dec 17, 2020 | mahesh |

ಬಂಟ್ವಾಳ : ಯಾವುದೇ ಕಡತಗಳ ವಿಲೇವಾರಿಗೆ ವಿಳಂಬ ಧೋರಣೆ ಅನುಸರಿಸದೆ, ಜನತೆಯ ಹಿತದೃಷ್ಟಿಯಿ‌ಂದ ಶೀಘ್ರ ವಿಲೇವಾರಿ ಮಾಡಬೇಕು ಬಂಟ್ವಾಳ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು  ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್ ಹೇಳಿದರು.

Advertisement

ಬಿ.ಸಿ.ರೋಡಿನ ಬಂಟ್ವಾಳ ತಾಲೂಕು ಕಛೇರಿಗೆ ಗುರುವಾರ ಭೇಟಿ ನೀಡಿದ ಅವರು, ಕಡತ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಂದ ವಿಲೇವಾರಿಯಾಗದೆ ಬಾಕಿಯುಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ, ಪ್ರತಿ 15 ದಿನಗಳಿಗೊಮ್ಮೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ, ಸರ್ಕಾರಿ ಜಮೀನು ಅತಿಕ್ರಮಣ ಹಾಗೂ ಅಕ್ರಮ ಕೋರೆಗಳ ಕುರಿತಾಗಿ ಬಂದಿರುವ ದೂರುಗಳ ಕುರಿತಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಾಗೂ ತಹಶೀಲ್ದಾರರು ಜಂಟಿಯಾಗಿ ಸ್ಥಳ ತನಿಖೆ ಮಾಡಬೇಕು, ವಿಲೇವಾರಿಯಾಗದೆ ಉಳಿದಿರುವ ಕಡತಗಳ ಕುರಿತಾಗಿ ಕಾರಣ ಸಹಿತ ಸಮಗ್ರ ಮಾಹಿತಿ ನೀಡುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದವರು ಹೇಳಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಕಡತಗಳ ಪರಿಶೀಲನೆ ಹಾಗೂ ದೂರು ಅರ್ಜಿಗಳ ವಿಚಾರಣೆ ನಡೆಸಲಾಗಿದೆ ಎಂದರು.

ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ, ಡಿ.ವೈ.ಎಸ್ಪಿ. ವಿಜಯಪ್ರಕಾಶ್, ಲೋಕಾಯುಕ್ತ ಇನ್ಸ್‌ಪೆಕ್ಟರ್ ಅಮಾನುಲ್ಲಾ ಖಾನ್, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಬಂಟ್ವಾಳ ತಹಶೀಲ್ದಾರ್ ರಶ್ಮೀ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next