ದೇವನಹಳ್ಳಿ: ತಾಲೂಕಿನ ಚಪ್ಪರದ ಕಲ್ಲು ಬಳಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಸಂಕೀರ್ಣಕ್ಕೆ ಶೀಘ್ರ ಎಲ್ಲಾ ಇಲಾಖಾ ಕಚೇರಿಗಳು ಸ್ಥಳಾಂತರವಾಗಿ ಕಾರ್ಯಾರಂಭವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ತಾಲೂಕಿನ ಚಪ್ಪರದ ಕಲ್ಲು ಬಳಿ ನಿರ್ಮಾಣ ವಾಗಿರುವ ಜಿಲ್ಲಾಡಳಿತ ಸಂಕೀರ್ಣಕ್ಕೆ ಭೇಟಿ ನೀಡಿ ಅಲ್ಲಿನ ಕಾಮಗಾರಿ ಮತ್ತು ಕಟ್ಟಡ ಪರಿಶೀಲಿಸಿ ಮಾತನಾಡಿದರು.
ವರದಿ ಸಿದ್ಧಗೊಳಿಸಿ:ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಇಲಾಖೆಗಳು ಚಪ್ಪರದ ಕಲ್ಲು ಬಳಿ ನಿರ್ಮಾಣ ವಾಗಿರುವ ಜಿಲ್ಲಾಡಳಿತ ಸಂಕೀರ್ಣಕ್ಕೆ ಸ್ಥಳಾಂತರಗೊ ಳ್ಳುತ್ತಿದೆ. ಉಳಿದಿರುವ ಎಲ್ಲಾ ಕೆಲಸಗಳು ತ್ವರಿತವಾಗಿ ಆಗಬೇಕು. ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಯಾಗಲಿದ್ದು ಅದಕ್ಕೆ ಎಲ್ಲಾ ರೀತಿಯ ಯೋಜನಾ ವರದಿ ಸಿದ್ಧಗೊಳಿಸಬೇಕು ಎಂದು ಹೇಳಿದರು.
ಒಂದೇ ಸೂರಿನಡಿ ಕಚೇರಿಗಳು : ಜಿಲ್ಲಾ ಪಂಚಾಯ್ತಿ, ಜಿಲ್ಲಾಧಿಕಾರಿ ಕಚೇರಿ, ಖಜಾನೆ, ಚುನಾವಣಾ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಸಂಸದರ ಕಚೇರಿ, ಜಿಲ್ಲಾಧಿಕಾರಿಗಳ ನ್ಯಾಯಾಲಯ ಹಾಗೂ ವಿವಿಧ ನ್ಯಾಯಾಲಯಗಳು ಹಾಗೂ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.
ಆಯುಧ ಪೂಜೆ ಮಾಡಿ: ಪ್ರತಿ ಜನರಿಗೂ 4 ತಾಲೂಕುಗಳಿಂದ ಬರುವ ಜನರಿಗೆ ಬಸ್‌ಗಳ ಸೌಲಭ್ಯ, ರಸ್ತೆಗಳ ಅಭಿವೃದ್ಧಿ ಹೀಗೆ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈ ಭಾಗದ ಜನರಿಗೆ ತಪ್ಪುವಂತಾ ಗಿದೆ. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿಯೇ ಜಿಲ್ಲಾ ಕಚೇರಿಗಳು ಕಾರ್ಯಾರಂಭ ಮಾಡುತ್ತಿದ್ದವು.
ರಾಮನಗರ ಜಿಲ್ಲೆ ಆದಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಳಗೊಂಡ 4 ತಾಲೂಕುಗಳು ಇದ್ದವು. ಆಯುಧ ಪೂಜೆಯನ್ನು ಇಲ್ಲಿಯೇ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕರೀಗೌಡ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.ಲತಾ, ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ, ಜಿಪಂ ಸದಸ್ಯ ಕೆ.ಸಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮನಾಥಪುರ ಸಿ.ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ವಿಭಾಗದ ಮಾಜಿ ಅಧ್ಯಕ್ಷ ಎ.ಚಿನ್ನಪ್ಪ ಇದ್ದರು.