Advertisement

ಪಾರಂಪರಿಕ ದೇಗುಲ ಬಿಟ್ಟು ಕೊಡುವ ಬಗ್ಗೆ ಶೀಘ್ರ ನಿರ್ಧಾರ

07:33 AM Nov 15, 2017 | |

ವಿಧಾನಪರಿಷತ್ತು: ಕಡಿಮೆ ಆದಾಯ ಬರುವ ಮತ್ತು ವಂಶ ಪಾರಂಪರ್ಯ ಹಾಗೂ ಕುಟುಂಬ ಪಾರಂಪರ್ಯ ದೇವಸ್ಥಾನಗಳನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಡುವ ಕಡತ ಸರ್ಕಾರದ ಪರಿಶೀಲನೆಯಲ್ಲಿದ್ದು, ಆದಷ್ಟು ಬೇಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಮಂಗಳವಾರ ಕಾಂಗ್ರೆಸ್‌ನ ಶ್ರೀಕಾಂತ ಘೋಕ್ಲೃಕರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸದಾಗಿ ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಯಾವ ಉದ್ದೇಶವೂ ಇಲ್ಲವೆಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 34,599 ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ಈ ಪೈಕಿ ಎ ಕೆಟಗರಿಯ 178 ದೇವಸ್ಥಾನಗಳ ಪೈಕಿ 140 ದೇವ 
ಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಉಳಿದಂತೆ ಬಿ ಮತ್ತು ಸಿ ಕೆಟಗರಿಯಲ್ಲಿ ಬರುವ ಕಡಿಮೆ ಆದಾಯವಿರುವ ಮತ್ತು ವಂಶ ಪಾರಂಪರ್ಯವಾಗಿ, ಕುಟುಂಬ ಪಾರಂಪರ್ಯವಾಗಿ ನಡೆದುಕೊಂಡು ಬಂದಿರುವ ದೇವಸ್ಥಾನಗಳನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಡುವ ಕಡತ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಪೈಕಿ ಸಿ ಕೆಟಗರಿಯ 70 ದೇವಾಲಯಗಳನ್ನು ಇಲಾಖೆಯಿಂದ ಕೈಬಿಟ್ಟು ಸಂಬಂಧಿಸಿದವರಿಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದಿದ್ದು, ಆದಷ್ಟು ಬೇಗ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದು  ಕೊಳ್ಳಲಾಗುವುದು ಎಂದರು.

ನೂತನ ಕಾಯ್ದೆ: ರಾಜ್ಯ ಧಾರ್ಮಿಕ ಪರಿಷತ್ತಿನ ನಿರ್ಣಯದಂತೆ ರಾಜ್ಯದ ಎಲ್ಲ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಗಳ ಸುಗಮ ಆಡಳಿತದ ಹಿತದೃಷ್ಟಿಯಿಂದ ನೂತನ ಕಾಯ್ದೆ ರಚಿಸಲು ಕರಡು ಸಿದ್ಧಪಡಿಸಲು 6 ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಮಧ್ಯ ಪ್ರವೇಶಿಸಿ, ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವುದರ ವಿರುದ್ಧ ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಮಠಾಧಿಶರು, ಧಾರ್ಮಿಕ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಅವರೊಂದಿಗೆ ಮಾತನಾಡಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ 23 ಸಾವಿರ ಅರ್ಚಕರಿದ್ದು, ಮಂಗಳಾರತಿ ತಟ್ಟೆ ಅವಲಂಬಿಸಿದ್ದ ಅವರಿಗೆ ಸರ್ಕಾರದಿಂದ ಮಾಸಿಕ 7 ಸಾವಿರ ರೂ. ನೀಡುವಂತೆ ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಸಲಹೆ ನೀಡಿದರು.

ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳುವುದಿಲ್ಲ ಎಂದು ಹೇಳುತ್ತೀರಿ. ಆದರೆ, ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿ ರಚಿಸಲು ಹೈಕೋರ್ಟ್‌ ನೀಡಿದ ತಡೆಯಾಜ್ಞೆ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಏಕೆ?
ಅಂತಹ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದ ಮೇಲೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಬಾರದೇಕೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ ಪ್ರಶ್ನಿಸಿದರು. 

ದೇವರಲ್ಲಿ ಕೆಟೆಗರಿ ಯಾಕೆ: ದೇವರು, ದೇವಸ್ಥಾನದಲ್ಲಿ ಕೆಟೆಗರಿ ಮಾಡುವುದು ಏಕೆ? ದಲಿತರಿಗೆ ಕೇವಲ ಮಾರಮ್ಮ, ದುರ್ಗಮ್ಮ ದೇವರುಗಳನ್ನು ಮಾತ್ರ ಏಕೆ ಮೀಸಲಿಟ್ಟಿದ್ದೀರಿ? ದಲಿತರಿಗೆ ಬೇರೆ ದೇವರು, ಮೇಲ್ಜಾತಿಗಳಿಗೆ ಬೇರೆ ದೇವರು ಎಂಬ 
ತಾರತಮ್ಯವೇಕೆ? ದೇವರಗಳನ್ನು ಅದಲು-ಬದಲು ಮಾಡುವ ಯೋಜನೆ ಸರ್ಕಾರದ ಮುಂದಿದೆಯಾ ಎಂದು ಬಿಜೆಪಿಯ ಕೆ.ಬಿ.ಶಾಣಪ್ಪ ಪ್ರಶ್ನಿಸಿದರು.

Advertisement

“ಕಾಂಗ್ರೆಸ್‌ ನೆಗೆದು ಬೀಳುವಂತೆ ಮಾಡುತ್ತೇನೆ’ 
ವಿಧಾನಪರಿಷತ್ತು: “ಇಂತಹ ಖಾತೆ ಕೊಡಿ ಎಂದು ನಾನು ಯಾವತ್ತೂ ಕೇಳಿಲ್ಲ. ಮುಂದಿನ ಬಾರಿ ಮುಜರಾಯಿ ಖಾತೆಯನ್ನೇ ಕೊಡಿ
ಎಂದು ಕೇಳಿ ಪಡೆದುಕೊಳ್ಳುತ್ತೇನೆ. ಮಜರಾಯಿ ಖಾತೆ ಸಿಕ್ಕರೆ ಅದು ನನ್ನ ಸೌಭಾಗ್ಯ ಅಂದುಕೊಳ್ಳುತ್ತೇನೆ’ ಎಂದು ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ ಮಾತು ಮೇಲ್ಮನೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಮುಜರಾಯಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಸಚಿವ ರುದ್ರಪ್ಪ ಲಮಾಣಿ ಉತ್ತರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಈಶ್ವರಪ್ಪ, ಮುಜರಾಯಿ ಖಾತೆ ಎಂದರೆ ದೇವರ ಕೆಲಸ. ಡಿ. ಕೆ.ಶಿವಕುಮಾರ್‌ ಅಂಥವರಿಗೇ ಸಿಗದ ಭಾಗ್ಯ ನಿಮಗೆ ಸಿಕ್ಕಿದೆ ಎಂದು ರುದ್ರಪ್ಪ ಲಮಾಣಿ ಅವರನ್ನು ಛೇಡಿಸಿದರು.

ಮುಜರಾಯಿ ಇಲಾಖೆ ನಿಭಾಯಿಸಿದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆಂಬ ಮೂಢನಂಬಿಕೆ ಇದೆಯಲ್ಲವೇ ಎಂದು
ಬಸವನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿದಾಗ, ನಾನು ಅನೇಕ ಖಾತೆಗಳನ್ನು ನಿಭಾಯಿಸಿದ್ದೇನೆ. ಈವರೆಗೆ ಇಂತಹದೇ ಖಾತೆ ಕೊಡಿ ಎಂದು ಕೇಳಿಲ್ಲ. ಆದರೆ, ಮುಂದಿನ ಬಾರಿ ಮುಜರಾಯಿ ಖಾತೆ ಕೇಳಿ ಪಡೆದುಕೊಳ್ಳುತ್ತೇನೆ. ಖಾತೆ ಸಿಕ್ಕರೆ ನನ್ನ ಸೌಭಾಗ್ಯ ಅಂದುಕೊಳ್ಳುತ್ತೇನೆ. ಏಕೆಂದರೆ, ನಾನು ಮುಜರಾಯಿ ಸಚಿವ ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ನೆಗೆದು ಬಿದ್ದು ಹೋಗುತ್ತದೆ. ದೇವರ
ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಂತಾಗುತ್ತದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next