ಬಂಟ್ವಾಳ: ಈ ಬಾರಿ ಮಳೆಗಾಲ ಬೇಗನೆ ಆರಂಭಗೊಳ್ಳುವ ಲಕ್ಷಣ ಕಂಡುಬರುತ್ತಿದೆ. ಹೀಗಾಗಿ ನಗರ ಸ್ಥಳೀಯಾಡಳಿತಗಳು ಶೀಘ್ರದಲ್ಲಿ ಸಿದ್ಧಗೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಬಂಟ್ವಾಳ ನಗರದ ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಆರಂಭಗೊಳ್ಳಬೇಕಿದ್ದು, ಪುರಸಭೆ ಕಾರ್ಯೋನ್ಮುಖವಾಗಬೇಕಿದೆ. ನಗರ ಭಾಗದಲ್ಲಿ ಹರಿಯುವ ನಾಲ್ಕೈದು ಬೃಹತ್ ತೋಡುಗಳಲ್ಲಿ ಹೂಳು ತುಂಬಿಕೊಂಡಿದ್ದು, ಪ್ರಸ್ತುತ ನೀರು ನಿಲ್ಲುತ್ತಿದೆ. ಅದು ಸರಾಗವಾಗಿ ಹರಿಯದೆ ಇದ್ದರೆ ಮಳೆಗಾಲದಲ್ಲಿ ಇನ್ನಷ್ಟು ತೊಂದರೆಯಾಗುವ ಆತಂಕವಿದೆ. ಜತೆಗೆ ಸಣ್ಣಪುಟ್ಟ ಚರಂಡಿಗಳು ಕೂಡ ಹದಗೆಟ್ಟಿದ್ದು, ಅವುಗಳ ಹೂಳು ತೆಗೆಯುವ ಕಾರ್ಯಗಳು ತುರ್ತಾಗಿ ನಡೆಯಬೇಕಾದ ಅಗತ್ಯ ಇದೆ.
ಪೊದೆಗಳ ತೆರವೂ ಅಗತ್ಯ
ಬಂಟ್ವಾಳ ಪೇಟೆ, ಭಂಡಾರಿ ಬೆಟ್ಟು, ಬಸ್ತಿಪಡು, ಮೆಲ್ಕಾರ್ ಮೊದಲಾದ ಭಾಗಗಳಲ್ಲಿ ತೋಡು ಗಳಲ್ಲಿ ಹೂಳಿನ ಜತೆಗೆ ಪೊದೆಗಳು ಕೂಡ ತುಂಬಿ ಹೋಗಿವೆ. ಹೀಗಾಗಿ ಅದರ ತೆರವು ಕೂಡ ನಡೆಯಬೇಕಿದೆ. ಹೂಳು ತೆಗೆದು ಪೊದೆಗಳನ್ನು ಹಾಗೇ ಬಿಟ್ಟಲ್ಲಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ತೊಂದರೆ ಎದುರಾಗಲಿದೆ. ಬಿ.ಸಿ.ರೋಡ್-ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿ ಪರಿಣಾಮ ಇಲ್ಲಿನ ಚರಂಡಿ ಅವ್ಯ ವಸ್ಥೆಯಿಂದ ಕೆಲವು ಮನೆಗಳ ಅಂಗಳಕ್ಕೆ ಕೆಸರು ನೀರು ನುಗ್ಗಿತ್ತು. ಹೀಗಾಗಿ ನೂತನವಾಗಿ ನಿರ್ಮಿಸಲಾದ ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕಿದೆ.
ಕೃತಕ ನೆರೆ ಭೀತಿ
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡ್, ಪಾಣೆಮಂಗಳೂರು , ಮೆಲ್ಕಾರ್ ಭಾಗದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ತಗ್ಗು ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ತುಂಬಿಸಲಾಗಿದೆ. ಈ ಎಲ್ಲ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದು, ಈ ಬಾರಿ ಇತರ ಕಡೆಗಳಿಗೆ ನೀರು ನುಗ್ಗಿ ಕೃತಕ ನೆರೆಯ ಭೀತಿಯೂ ಇದೆ. ಇವೆಲ್ಲ ನೇತ್ರಾವತಿ ನದಿ ಹಾಗೂ ತೋಡುಗಳ ಕಿನಾರೆ ಪ್ರದೇಶಗಳಾಗಿದ್ದು, ಸಾಕಷ್ಟು ಕಡೆಗಳ ನೀರು ತಗ್ಗು ಪ್ರದೇಶಕ್ಕೆ ಹರಿದು ಬಳಿಕ ನದಿ ಸೇರುತ್ತಿದ್ದವು. ಆದರೆ ಈಗ ಮಣ್ಣು ಹಾಕಿರುವುದರಿಂದ ನೀರು ಸರಾಗವಾಗಿ ಹರಿಯುವುದಕ್ಕೂ ತೊಂದರೆ ಎದುರಾಗಬಹುದು. ಹೆದ್ದಾರಿಗಾಗಿ ಮಣ್ಣು ತುಂಬಿರುವ ಜತೆಗೆ ಕೆಲವೆಡೆ ಖಾಸಗಿ ವ್ಯಕ್ತಿಗಳು ಜಮೀನಿನ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿದ್ದಾರೆ. ಇದರಿಂದಲೂ ಕೃತಕ ನೆರೆ ಸೃಷ್ಟಿಯ ಆತಂಕವಿದೆ.
ಟೆಂಡರ್ ಕರೆದು ಕಾಮಗಾರಿ
ಮಳೆಗಾಲ ಸಿದ್ಧತೆಯ ಹಿನ್ನೆಲೆಯಲ್ಲಿ ಚರಂಡಿಯ ಹೂಳು ತೆಗೆಯುವುದು ಸೇರಿ ಇತರ ಕಾಮಗಾರಿಗಳಿಗೆ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ. ಪ್ರಸ್ತುತ ಟೆಂಡರ್ ಆಗದೆ ಕಾಮಗಾರಿ ನಡೆದಿಲ್ಲ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದ್ದಾರೆ.