Advertisement

ಹನೂರಿಗೆ ಶೀಘ್ರ ಬಸ್‌ ಡಿಪೋ

07:24 AM Feb 04, 2019 | |

ಹನೂರು: ಬಸ್‌ ಡಿಪೋ ಸ್ಥಾಪಿಸಲು 5 ಎಕರೆ ಜಾಗವನ್ನು ರಾಮನಗುಡ್ಡ ಸಮೀಪ ನಿಗದಿಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಹನೂರು ಪಟ್ಟಣಕ್ಕೆ ಪ್ರತ್ಯೇಕ ಡಿಪೋ ನೀಡಲು ಆಸಕ್ತಿವಹಿಸಿದ್ದಾರೆ. ಅತಿ ಶೀಘ್ರ ಡಿಪೋ ಮಂಜೂರು ಮಾಡಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ನರೇಂದ್ರ ತಿಳಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದಲ್ಲಿ 80 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ನೆಲಹಾಸು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹನೂರು ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಪ್ರತ್ಯೇಕ ಡಿಪೋ ನೀಡುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ರಾಮನಗುಡ್ಡ ಸಮೀಪ 5 ಎಕರೆ ಜಾಗವನ್ನೂ ನಿಗದಿಪಡಿಸಲಾಗಿತ್ತು.

ಈ ಜಾಗವನ್ನು ಕಂದಾಯ ಇಲಾಖೆಯಿಂದ ಸಾರಿಗೆ ಸಂಸ್ಥೆಗೆ ನೀಡಲು ಜಿಲ್ಲಾಧಿಕಾರಿ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ, ಕೆಎಸ್ಸಾರ್ಟಿಸಿಯ ಜಿಲ್ಲಾಧಿಕಾರಿಗಳು ಈ ಸ್ಥಳ ಪಟ್ಟಣದ ಬಸ್‌ ನಿಲ್ದಾಣದಿಂದ 6 ಕಿ.ಮೀ. ದೂರದಲ್ಲಿದ್ದು, ಪ್ರತಿ ಬಸ್‌ ಸಂಚರಿಸಲು 12 ಕಿ.ಮೀ. ಸಂಚಾರ ಮಾಡಬೇಕಿರುವುದರಿಂದ ಸಂಸ್ಥೆಗೆ ನಷ್ಟವಾಗುವ ಸಂಭವವಿದೆ ಎಂದು ವರದಿ ನೀಡಿದ್ದರು.

ಬಳಿಕ ಹನೂರು ಪಟ್ಟಣದಲ್ಲಿ ಜಾಗ ಖರೀದಿಸಲು ಹೆಚ್ಚಿನ ಹಣ ಖರ್ಚಾಗುವುದರಿಂದ ಸಾಧ್ಯವಿಲ್ಲ ಎಂದು ಮತ್ತೂಮ್ಮೆ ಮನವಿ ಮಾಡಿದಾಗ ಹಾಲಿ ನಿಗದಿಪಡಿಸಿರುವ ಜಾಗದಲ್ಲೇ ಮಂಜೂರಾತಿ ನೀಡಲು ಆಡಳಿತಾತ್ಮಕ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಅತಿ ಶೀಘ್ರದಲ್ಲಿಯೇ ಮಂಜೂರಾತಿ ದೊರೆಯಲಿದೆ ಎಂದು ತಿಳಿಸಿದರು.

ಉತ್ತಮ ಆದಾಯ: ಕೊಳ್ಳೇಗಾಲ ಡಿಪೋದಲ್ಲಿ ಉತ್ತಮ ಆದಾಯ ಬರುತ್ತಿರುವುದರಿಂದ ಮತ್ತು ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಸಂದರ್ಭಗಳಲ್ಲಿ ಲಕ್ಷಾಂತರ ಜನರು ಭೇಟಿ ನೀಡುವುದರಿಂದ ಹಾಗೂ ಅಮಾವಾಸ್ಯೆ, ಹುಣ್ಣಿಮೆ ಸಂದರ್ಭಗಳಲ್ಲೀ ಅತಿ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ಕೊಳ್ಳೇಗಾಲ ವಿಭಾಗ ಉತ್ತಮ ಆದಾಯದಲ್ಲಿದೆ.

Advertisement

ಈ ಹಿನ್ನೆಲೆ ಸಚಿವ ಪುಟ್ಟರಂಗಶೆಟ್ಟಿ ಕೂಡ ಹನೂರು ಪಟ್ಟಣದಲ್ಲಿ ಡಿಪೋ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ರಾಜೇಂದ್ರ, ಜಿಪಂ ಸದಸ್ಯ ಬಸವರಾಜು, ಪಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು, ಚಾಮುಲ್‌ ಅಧ್ಯಕ್ಷ ಗುರುಮಲ್ಲಪ್ಪ, ಟಿಎಪಿಸಿ ಎಂಎಸ್‌ ನಿರ್ದೇಶಕ ಮಾದೇಶ್‌, ಮುಖಂಡರಾದ ಚಿಕ್ಕ ತಮ್ಮಯ್ಯ, ವೆಂಕಟರಮಣನಾಯ್ಡು, ಮಹೇಶ್‌, ರವಿ, ರಾಜು, ನಟರಾಜು, ನಂಜುಂಡೇಗೌಡ, ಮರಿಗೌಡ, ಗುತ್ತಿಗೆದಾರರಾದ ದಾಮೋದರ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next