ಬೆಂಗಳೂರು: ರಾಜ್ಯದಲ್ಲಿ 12 ವರ್ಷಗಳಿಂದ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಮುಂಭಡ್ತಿಗೆ ಶೀಘ್ರ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಲಿಖೀತ ರೂಪದಲ್ಲಿ ಪ್ರತಿಕ್ರಿಯಿಸಿದ ಅವರು, ಪಿಡಿಒಗಳು ಸುಮಾರು 12 ವರ್ಷಗಳಿಂದ ಒಂದೇ ಹುದ್ದೆಯಲ್ಲಿರುವುದು ಸರಕಾರದ ಗಮನಕ್ಕೆ ಬಂದಿದೆ. ಅವರನ್ನು ಸಹಾಯಕ ನಿರ್ದೇಶಕ ಹುದ್ದೆಗೆ ಭಡ್ತಿಗೊಳಿಸಲು ಶೀಘ್ರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಪಿಡಿಒ ಹುದ್ದೆಗಳು ಮಂಜೂರಾಗಿವೆ. ಇನ್ನು ಪ್ರಸ್ತುತ ಮಂಜೂರಾಗಿರುವ ಸಹಾಯಕ ನಿರ್ದೇಶಕರ ಹುದ್ದೆಗಳ ಸಂಖ್ಯೆ 452. ಈ ಪೈಕಿ 318 ಹುದ್ದೆಗಳು ಖಾಲಿ ಇವೆ. ಪಿಡಿಒ ವೃಂದದ ಜೇಷ್ಠತಾ ಪಟ್ಟಿ ಕುರಿತು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧದ ಪ್ರಕರಣ ಬಾಕಿ ಇದ್ದು, ಇತ್ಯರ್ಥಗೊಂಡ ಬಳಿಕ ನಿಯಮಾನುಸಾರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಎಪಿಒ-1 ಮತ್ತು ಎಪಿಒ-2 ಹುದ್ದೆಗಳನ್ನು ಕೇವಲ ಪಿಡಿಒ ವೃಂದದಿಂದ ಪದೋನ್ನತಿ ಮೂಲಕ ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಬಹುದು. ಈ ನಿಟ್ಟಿನಲ್ಲಿ ಸರಕಾರ ಕೈಗೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಈ ಎರಡೂ ವೃಂದದ ಹುದ್ದೆಗಳು ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಕೆ ಮತ್ತು ಸ್ಥಳೀಯ ಆಡಳಿತ ಶಾಖೆ) ನಿಯಮಗಳ ವೃಂದ ಬಲದಲ್ಲಾಗಲಿ ಅಥವಾ ಇತ್ತೀಚೆಗೆ ರಚಿಸಲಾದ ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್‌ರಾಜ್ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳ ಬಲದಲ್ಲಾಗಲಿ ಸೇರ್ಪಡೆ ಆಗುವುದಿಲ್ಲ. ಈ ವೃಂದದ ಹುದ್ದೆಗಳು ಮೂಲತಃ ಗ್ರಾಮೀಣಾಭಿವೃದ್ಧಿ ಕೋಶ ಯೋಜನೆ ಅಡಿ ಸೃಜಿಸಿದ ಹುದ್ದೆಗಳಾಗಿವೆ. ಅವುಗಳನ್ನು ಡಿಆರ್‌ಡಿಎ ಯೋಜನೆ ಅಡಿ ಮಂಜೂರಾದ ಹುದ್ದೆಗಳೊಂದಿಗೆ ಒಆರ್‌ಡಿಪಿ ಲೆಕ್ಕಶೀರ್ಷಿಕೆಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.