Advertisement

ಡಿಎಲ್‌, ವಿಮೆ ನವೀಕರಣ, ಮಾಲಿನ್ಯ ತಪಾಸಣೆಗೆ ಕ್ಯೂ

11:20 PM Sep 09, 2019 | mahesh |

ಮಹಾನಗರ: ಸಂಚಾರ ನಿಯಮ ಉಲ್ಲಂಘನೆಯ ಅಪರಾಧಕ್ಕೆ ದಂಡ ಮೊತ್ತ ಏರಿಸಿ ಕೇಂದ್ರ ಸರಕಾರ ಹೊರಡಿಸಿದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗುತ್ತಿದ್ದಂತೆ ಡ್ರೈವಿಂಗ್‌ ಲೈಸನ್ಸ್‌ ಮತ್ತು ವಾಹನ ವಿಮೆ ನವೀಕರಣ, ಹೊಗೆ ಮಾಲಿನ್ಯ ತಪಾಸಣೆ, ಫಿಟ್‌ನೆಸ್‌ ಸರ್ಟಿಫಿಕೆಟ್‌ ಇತ್ಯಾದಿ ಪ್ರಕಿಯೆಗಳನ್ನು ಮಾಡಿಸಲು ಜನರ ಓಡಾಟ-ಪರದಾಟ ಎಲ್ಲೆಡೆ ಜಾಸ್ತಿಯಾಗಿದೆ.

Advertisement

ಮಂಗಳೂರಿನ ಸಾರಿಗೆ ಇಲಾಖೆ, ಎಮಿಶನ್‌ ಟೆಸ್ಟ್‌ ಸೆಂಟರ್‌, ವಿಮಾ ಕಚೇರಿಗಳಲ್ಲಿ ವಾಹನ ಚಾಲಕರ ಮತ್ತು ಮಾಲಕರ ಸರತಿ ಸಾಲು ಕಾಣಿಸುತ್ತಿದೆ. ಹಲವು ವರ್ಷಗಳಿಂದ ಡ್ರೈವಿಂಗ್‌ ಲೈಸನ್ಸ್‌, ವಾಹನ ವಿಮೆ ನವೀಕರಣ, ಎಮಿಷನ್‌ ಟೆಸ್ಟ್‌ ಮತ್ತು ಫಿಟ್‌ನೆಸ್‌ ಸರ್ಟಿಫಿಕೆಟ್‌ ತಪಾಸಣೆಯನ್ನು ನಾಳೆ ಮಾಡಿಸಿದರೆ ಸಾಕು ಎಂದು ಮುಂದೂಡುತ್ತಲೇ ಬಂದವರು ದಂಡದ ಮೊತ್ತದ ಅಧಿಕಗೊಂಡ ಭೀತಿಯಿಂದ ಎದ್ದು ಬಿದ್ದು ಸಾರಿಗೆ ಇಲಾಖೆ, ಇನ್ಶೂರೆನ್ಸ್‌ ಕಚೇರಿ, ಎಮಿಷನ್‌ ಟೆಸ್ಟ್‌ ಸೆಂಟರ್‌ಗಳತ್ತ ಧಾವಿಸುತ್ತಿದ್ದಾರೆ.

ಸಂಚಾರ ನಿಯಮಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಾಲ ಕಾಲಕ್ಕೆ ನವೀಕರಿಸಿ, ಅಪ್‌ಡೇಟ್‌ ಮಾಡಿಸದೆ ನಿಯಮ ಉಲ್ಲಂಘಿಸಿ ಅದೆಷ್ಟೋ ಮಂದಿ ಚಾಲಕ/ಮಾಲಕರು ವಾಹನಗಳನ್ನು ಚಲಾಯಿಸುತ್ತಿದ್ದರು ಎಂಬ ಸತ್ಯ ಸಂಗತಿ ಈ ವಿದ್ಯಮಾನಗಳಿಂದ ಬೆಳಕಿಗೆ ಬರುತ್ತಿದೆ. ಸರಕಾರದ ಬೊಕ್ಕಸಕ್ಕೂ ಇದರಿಂದ ಸಾಕಷ್ಟು ಆದಾಯ ನಿರೀಕ್ಷಿಸಬಹುದಾಗಿದೆ.

ದುಬಾರಿ ದಂಡದ ಭಯ!
ಈ ಹಿಂದೆ ರಿನೀವಲ್‌ ದಂಡ ಮೊತ್ತ ವರ್ಷಕ್ಕೆ 1,000 ರೂ. ಇತ್ತು. ಈಗ ಅದನ್ನು 100 ರೂಪಾಯಿಗೆ ಇಳಿಸಲಾಗಿದೆ. ಆದರೆ ಡ್ರೈವಿಂಗ್‌ ಲೈಸನ್ಸ್‌ ರಿನೀವಲ್‌ ಮಾಡಿಸದೆ ವಾಹನ ಚಲಾಯಿಸಿ ಟ್ರಾಫಿಕ್‌ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಪಾವತಿಸ ಬೇಕಾದ ದಂಡ ಶುಲ್ಕ 5,000 ರೂ. ಗಳಿಗೇರಿದೆ. ಈ ಹಿಂದೆ ಅದು 300 ರೂ. ಇತ್ತು. ಇಷ್ಟೊಂದು ದುಬಾರಿ ದಂಡ ಮೊತ್ತ ಪಾವತಿಸ ಬೇಕಾಗಿರುವ ಭಯದ ಕಾರಣ ಈಗ ಡ್ರೈವಿಂಗ್‌ ಲೈಸನ್ಸ್‌ ನವೀಕರಣವನ್ನು ಮುಗಿಬಿದ್ದು ಮಾಡಿಸುತ್ತಿದ್ದಾರೆ ಎಂದು ಮಂಗಳೂರಿನ ಸಾರಿಗೆ ಕಚೇರಿಯ ಮೂಲಗಳು ಉದಯವಾಣಿಗೆ ತಿಳಿಸಿವೆ.

ಜಾಗೃತಿಗೊಂಡ ಸವಾರರು
ಹೊಸ ದಂಡ ಮೊತ್ತ ಜಾರಿಯಿಂದಾಗಿ ಜನರಲ್ಲಿ ಒಂದು ಕಡೆ ಭಯ ಹಾಗೂ ಇನ್ನೊಂದೆಡೆ ಜಾಗೃತಿ ಮೂಡಿದೆ. ಹಾಗಾಗಿ ವಾಹನ ವಿಮೆ ಮಾಡಿಸಲು ವಿಮಾ ಕಚೇರಿಗಳಿಗೆ ಧಾವಿಸುತ್ತಿದ್ದಾರೆ. ಇದುವರೆಗೆ ವಿಮೆ ಇಲ್ಲದೆ ವಾಹನ ಚಲಾಯಿಸುತ್ತಿದ್ದವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ 100 ರೂ. ದಂಡ ಪಾವತಿಸಿ ಬಳಿಕ ಸುಮ್ಮನಾಗುತ್ತಿದ್ದರು.

Advertisement

ಮಳೆ ಬಂದಾಗ ಕೊಡೆ ಹಿಡಿಯ ಬೇಕಾಗುತ್ತದೆ
ಮಳೆ ಬಂದರೆ ಕೊಡೆ ಹಿಡಿಯ ಬೇಕಾಗುತ್ತದೆ, ಕೊಡೆ ಹಿಡಿಯುತ್ತಾರೆ. ಅದರಂತೆ ಹೊಸ ಕಾಯ್ದೆ ಜಾರಿಗೆ ಬಂದಾಗ, ಅದರಲ್ಲಿ ಕಟ್ಟು ನಿಟ್ಟಿನ ನಿಯಮಾವಳಿ ಇರುವುದರಿಂದ ಜನರು ಎಚ್ಚತ್ತಿದ್ದಾರೆ. ಹಾಗಾಗಿ ನಿಯಮ ಪಾಲನೆಗೆ ಮುಂದಾಗುತ್ತಿದ್ದಾರೆ ಎನ್ನುತ್ತಾರೆ ವಿಮಾ ಸಂಸ್ಥೆಯ ಓರ್ವ ಅಧಿಕಾರಿ.

ದಿನಕ್ಕೆ 50- 80 ಮಂದಿ ಬರುತ್ತಾರೆ
ವಾಹನ ವಿಮೆ, ಹೊಗೆ ಮಾಲಿನ್ಯ ತಪಾಸಣೆಗೆ ಈ ಹಿಂದೆ ದಿನಕ್ಕೆ 8- 10 ಮಂದಿ ಬರುತ್ತಿದ್ದರೆ ಈಗ 50- 80 ಮಂದಿ ಬರುತ್ತಿದ್ದಾರೆ. ದಿನವಿಡೀ ನಮಗೆ ಕೆಲಸದ ಒತ್ತಡ ಇರುತ್ತದೆ.
– ಜೂಡ್‌ ಗೊಡ್ವಿನ್‌ ಲೋಬೋ (ವಿಮೆ ಏಜಂಟ್‌ ಮತ್ತು ಎಮಿಷನ್‌ ಟೆಸ್ಟ್‌ ಸೆಂಟರ್‌ ಮಾಲಕ)

ಒಂಜಿ ಮಲ್ತ್‌ದ್‌ ಕೊರೆಲ, ಕಮ್ಮಿದ ಯಾವು!
ವಾಹನ ವಿಮೆ ನವೀಕರಣಕ್ಕೂ ಸಂಬಂಧ ಪಟ್ಟ ವಿಮಾ ಕಚೇರಿ ಮತ್ತು ಏಜನ್ಸಿಗಳಲ್ಲಿ ವಾಹನ ಚಾಲಕ, ಮಾಲಕರ ಕ್ಯೂ ಕಂಡು ಬರುತ್ತಿದೆ. ಕೆಲವರು ಅವಸರವಸರವಾಗಿ ವಿಮಾ ಏಜೆಂಟರ ಬಳಿ ಓಡಿ ಬಂದು “ಅರ್ಜೆಂಟಾದ್‌ ಒಂಜಿ ಮಲ್ತ್‌ ಕೊರೆಲ. ಕಮ್ಮಿದಯಾವು. ಪೊಲೀಸರೆಗ್‌ ತೋಜಾಯೆರೆ ಮಾತ್ರ’ (ತುರ್ತಾಗಿ ಒಂದು ವಿಮೆ ಮಾಡಿಸಿ ಕೊಡಿ. ಕಡಿಮೆ ಮೊತ್ತದ್ದು ಸಾಕು. ಪೊಲೀಸರಿಗೆ ತೋರಿಸಲು ಮಾತ್ರ) ಎಂಬುದಾಗಿ ದುಂಬಾಲು ಬೀಳುತ್ತಿರುವುದು ಕಂಡು ಬಂದಿದೆ.

ಹೆಚ್ಚುತ್ತಿದೆ ಹೆಲ್ಮೆಟ್‌ ಕಳ್ಳತನ
ಹೊಸ ಕಾಯ್ದೆಯಲ್ಲಿ ಹೆಲ್ಮೆಟ್‌ ಧಾರಣೆ ಮಾಡದಿರುವವರಿಗೆ ಅಧಿಕ ದಂಡ ವಿಧಿಸಿದ್ದು, ಇದರ ಪರಿಣಾಮವಾಗಿ ನಗರದ ಕೆಲವು ಭಾಗಗಳಲ್ಲಿ ಹೆಲ್ಮೆಟ್‌ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಸಹ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಮಾಡಿರುವುದರಿಂದ ಒಂದೇ ಹೆಲ್ಮೆಟ್‌ ಹೊಂದಿರುವವರು ವಾಹನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳಲ್ಲಿನ ಹೆಲ್ಮೆಟ್‌ ಎಗರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 58 ಎಮಿಷನ್‌ ಟೆಸ್ಟ್‌ ಸೆಂಟರ್‌
ವಾಹನಗಳ ದಟ್ಟಣೆಯಲ್ಲಿ ಮಂಗಳೂರು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ಇದರಿಂದಾಗಿ ಇಲ್ಲಿ ಹೊಗೆ ಮಾಲಿನ್ಯ ಪ್ರಮಾಣವೂ ಜಾಸ್ತಿ ಇದೆ. ಕೆಲವು ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಹೊಗೆ ಮಾಲಿನ್ಯ ತಪಾಸಣೆ ಮಾಡಲಾಗುತ್ತಿದೆ. ಸಾರಿಗೆ ಇಲಾಖೆಯ ಕಚೇರಿಯ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಇಂತಹ 58 ಎಮಿಷನ್‌ ಟೆಸ್ಟ್‌ ಸೆಂಟರ್‌ಗಳಿವೆ.

ಎಲ್ಲರೂ ಸಹಕರಿಸಿ
ಮಂಗಳೂರಿನಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ತಪ್ಪಿತಸ್ಥ ವಾಹನ ಚಾಲಕರಿಗೆ ಪರಿಷ್ಕೃತ ದಂಡ ಶುಲ್ಕಗಳ ಪ್ರಕಾರ ದಂಡ ವಿಧಿಸಲಾಗುತ್ತಿದೆ. ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು.
– ಮಂಜುನಾಥ ಶೆಟ್ಟಿ, ಎಸಿಪಿ, ಟ್ರಾಫಿಕ್‌, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next