Advertisement

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸುಲಭವಲ್ಲ

07:18 AM Mar 28, 2019 | Team Udayavani |

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಾಧ್ಯವೇ ಇಲ್ಲ. ಒಂದೊಮ್ಮೆ ಸೋರಿಕೆಯಾದಲ್ಲಿ ಪರೀಕ್ಷೆಯನ್ನೇ ಮುಂದೂಡುತ್ತೇವೆ. ಹೀಗಾಗಿ ವಿದ್ಯಾರ್ಥಿಗಳು, ಪಾಲಕ, ಪೋಷಕರು ಪ್ರಶ್ನೆ ಪತ್ರಿಕೆ ಸೋರಿಕೆಯ ವಂದತಿಗೆ ಕಿವಿಕೊಡದಿರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫ‌ರ್‌ ಸಲಹೆ ನೀಡಿದ್ದಾರೆ.

Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾದ ದಿನದಿಂದಲೂ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ವದಂತಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಅವರು, ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭಕ್ಕಿಂತ ಮೊದಲೇ ಪೊಲೀಸ್‌ ಹಾಗೂ ಗೃಹ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇವೆ. ಸಿಸಿಬಿ ಹಾಗೂ ಸೈಬರ್‌ ಕ್ರೈಂ ವಿಭಾಗದ ಜತೆಗೂ ಸಂಪರ್ಕದಲ್ಲಿದ್ದೇವೆ. ಈವರೆಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಸೋರಿಕೆ ಮಾಡುವುದು ಅಷ್ಟು ಸುಲಭವಲ್ಲ. 2016ರ ನಂತರ ನಿಮಯನ್ನು ಇನ್ನಷ್ಟು ಬಲಗೊಳಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಸಹಕರಿಸಿದ ಸಂಸ್ಥೆಯ ಮಾನ್ಯತೆಯನ್ನೇ ರದ್ದು ಮಾಡುತ್ತೇವೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಪರೀಕ್ಷೆ ಬರೆಯಬೇಕು ಎಂದು ಮನವಿ ಮಾಡಿದ್ದಾರೆ.

ಪರೀಕ್ಷೆ ಆರಂಭಕ್ಕೂ ಮುನ್ನ ಅಥವಾ ಪರೀಕ್ಷೆ ನಡೆಯುವಾಗ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಶಿಕ್ಷಾರ್ಹ ಅಪರಾಧ ಮೂರು ವರ್ಷ ಜೈಲು ಹಾಗೂ ಐದು ಲಕ್ಷ ದಂಡ ವಿಧಿಸಲು ಅವಕಾಶ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಾಮೂಹಿಕ, ಖಾಸಗಿ ನಕಲು, ಅವ್ಯವಹಾರ, ಫೋಟೋ ರವಾನೆ ಸೇರಿದಂತೆ ವಿಜಯಪುರ, ರಾಯಚೂರು, ಚಿಕ್ಕೋಡಿ, ಮಧುಗಿರಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಒಟ್ಟು ಏಳು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಇಲಾಖೆ ಸಲಹೆಗಳು
ಪರೀಕ್ಷೆ ಮುಗಿಯುವ ವರೆಗೂ ವಿದ್ಯಾರ್ಥಿಗಳು, ಪಾಲಕ, ಪೋಷಕರು ಸಾಮಾಜಿಕ ಜಾಲತಾಣದಿಂದ ದೂರವಿರಿ
ವಾಟ್ಸ್‌ಅಪ್‌, ಫೇಸ್‌ಬುಕ್‌ ಮತ್ತು ಟ್ವೀಟರ್‌ಗಳಲ್ಲಿ ಬರುವ ನಕಲಿ ಪ್ರಶ್ನೆ ಪತ್ರಿಕೆ ಫಾರ್ವಡ್‌ ಮಾಡದಿರಿ
ಜಾಲತಾಣ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ನಕಲಿ ಪತ್ರಿಕೆಗಳ ವಿರುದ್ಧ ಸಮೀಪದ ಠಾಣೆ ಅಥವಾ ಶಿಕ್ಷಣ ಸಂಸ್ಥೆ ಅಧಿಕಾರಿಗೆ ತಿಳಿಸಿ
ಈ ವರೆಗೆ ಸಿಕ್ಕಿರುವ ಎಲ್ಲಾ ಫೋಟೋ ಪ್ರಕ್ರಿಯೆಗಳು ನಕಲಿ

Advertisement

Udayavani is now on Telegram. Click here to join our channel and stay updated with the latest news.

Next