Advertisement

ಶೋಕಾಚರಣೆ ಇದ್ದರೂ “ಸಂವಿಧಾನದ ಸಂಭಾಷಣೆ’:ಆಕ್ರೋಶ

01:00 AM Jan 23, 2019 | Team Udayavani |

ಬೆಂಗಳೂರು: ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಸರ್ಕಾರಿ ರಜೆ, ರಾಜ್ಯಾದ್ಯಂತ ಶೋಕಾಚರಣೆಯ ನಡುವೆಯೂ ಸಮಾಜ ಕಲ್ಯಾಣ ಇಲಾಖೆ “ಸಂವಿಧಾನದ ಸಂಭಾಷಣೆ’ ಆಯೋಜಿಸಿದ್ದು ವಿವಾದದ ಸ್ವರೂಪ ಪಡೆದಿದೆ.

Advertisement

ಬಿಜೆಪಿ, ಕನ್ನಡ ಪರ ಸಂಘಟನೆ, ಅಖೀಲ ಭಾರತ ವೀರಶೈವ ಮಹಾಸಭೆ ಯುವ ಘಟಕದ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮೊದಲ ಗೋಷ್ಠಿ ನಂತರ ಎಲ್ಲ ಕಾರ್ಯಕ್ರಮ ರದ್ದಾಗಿದೆ ಎಂದು ಘೋಷಿಸಿದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇಡೀ ದಿನ ಗುಪ್ತ‌ವಾಗಿ ಸಂವಾದ ಗೋಷ್ಠಿ ನಡೆಸಿದ್ದು, ಅದರಲ್ಲಿ ಕನ್ಹಯ್ನಾ ಕುಮಾರ್‌, ಅಸಾಉದ್ದಿನ್‌ ಓವೈಸಿ ಸೇರಿ ಹಲವರು ಪಾಲ್ಗೊಂಡಿದ್ದು ವ್ಯಾಪಕ ಟೀಕೆಗೆ ಒಳಗಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆ ಸಂವಿಧಾನದ ಸಂಭಾಷಣೆ “ಬಂದ್‌’ ಮಾಡು ವುದಾಗಿ ಹೇಳಿದ್ದ ಸಂಘಟಕರು, ಮಧ್ಯಾಹ್ನ ಕಾರ್ಯಕ್ರಮ ಮುಂದುವರಿಸಿದರು. ನಿಗದಿಯಂತೆ “ಅಧಿಕಾರ ಕೇಂದ್ರೀಕರಣ ಮತ್ತು ವೈಯಕ್ತಿಕ ಸ್ವಾತಂತ್ರ್ಯ’ ವಿಷಯದ 4ನೇ ಗೋಷ್ಠಿಯಲ್ಲಿ ಕನ್ಹಯ್ನಾ ಕುಮಾರ್‌ ಮಾತನಾಡಿದ್ದಾರೆ. ಮಧ್ಯಾಹ್ನದ ಗೋಷ್ಠಿಗಳ ವರದಿ ಮಾಡಲು ಕೆಲವು ಮಾಧ್ಯಮದವರು ಸ್ಥಳಕ್ಕೆ ಹೋದಾಗ ಒಳಗೆ ಬಿಡದ ಭದ್ರತಾ ಸಿಬ್ಬಂದಿ ಕಾರ್ಯಕ್ರಮ ರದ್ದಾಗಿದೆ ಎಂದು ಹೇಳಿ ವಾಪಸ್‌ ಕಳುಹಿಸಿದರು.

ಶೋಕಾಚರಣೆಯಿದ್ದರೂ ಕಾರ್ಯಕ್ರಮ ಆಯೋಜಿಸಿರುವುದು ಅಕ್ಷಮ್ಯ. ಸಮ್ಮಿಶ್ರ ಸರ್ಕಾರವು ಸಿದ್ಧಗಂಗಾ ಶ್ರೀಗಳಿಗೆ ತೋರಿರುವ ಅಗೌರವ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಚಿವ ಪ್ರಿಯಾಂಕ್‌ ಖರ್ಗೆ ತಲೆದಂಡಕ್ಕೆ ಒತ್ತಾಯಿಸಿದೆ.

Advertisement

ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಸಂಭಾಷಣೆ ಕಾರ್ಯಕ್ರಮ ನಗರದ ಪಂಚತಾರಾ ಹೋಟೆಲೊಂದರಲ್ಲಿ ನಿಗದಿಯಾಗಿತ್ತು. ಆದರೆ, ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಅಧಿಕೃತ ಕಾರ್ಯಕ್ರಮ ರದ್ದುಗೊಳಿಸಿ, ಮಂಗಳವಾರ ಸರ್ಕಾರಿ ರಜೆ ನೀಡಿತ್ತು. ಆದರೆ, ಸಂವಿಧಾನ ಸಂಭಾಷಣೆ ಕಾರ್ಯಕ್ರಮ ರದ್ದುಗೊಳಿಸಿರಲಿಲ್ಲ. ಇದಕ್ಕೆ ವಿವಿಧ ಸಂಘನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ್ದರಿಂದ ಮಾಜಿ ಉಪರಾಷ್ಟ್ರಪತಿ ಹಮಿದ್‌ ಅನ್ಸಾರಿಯವರ ಭಾಷಣ ಹಾಗೂ ಮೊದಲ ಗೋಷ್ಠಿ ಬಳಿಕ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗುತ್ತಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಜಿ. ಕುಮಾರ್‌ ನಾಯಕ್‌ ಪ್ರಕಟಿಸಿದರು.

ಇದೊಂದು ರಾಷ್ಟ್ರಮಟ್ಟದ ವಿಚಾರಸಂಕಿರಣ, ಇಲ್ಲಿ ಯಾವುದೇ ಮನರಂಜನೆ ನಡೆಯುತ್ತಿಲ್ಲ. ಈ ಸೆಮಿನಾರ್‌ ಅನ್ನು ಸ್ವಾಮೀಜಿಯವರಿಗೆ ಅರ್ಪಿಸಿದ್ದೇವೆ ಎಂದು ಸಮರ್ಥಿಸಿಕೊಳ್ಳಲು ಸಚಿವ ಪ್ರಿಯಾಂಕ್‌ ಖರ್ಗೆ ಮುಂದಾದರು. 20 ಮಂದಿ ಬಂಧನ: ಕಾರ್ಯಕ್ರಮ ರದ್ದುಗೊಳಿಸುವಂತೆ ಖಾಸಗಿ ಹೋಟೆಲ್‌ ಎದುರು ಪ್ರತಿಭಟನೆ ನಡೆಸುತ್ತಿದ್ದ ಕರುನಾಡ ಸೇನೆ ಕಾರ್ಯಕರ್ತರು ಮತ್ತು ಇತರ ಪ್ರತಿಭಟನಾಕಾರರು ಸೇರಿ 20 ಮಂದಿಯನ್ನು ಪೊಲೀಸರು ಬಂಧಿಸಿದರು.

ರಹಸ್ಯ ಕಾರ್ಯಸೂಚಿ 
ಇಡೀ ದೇಶ ಶಿವಕುಮಾರ ಸ್ವಾಮೀಜಿಯವರ ಅಗಲಿಕೆಯ ನೋವಿನಲ್ಲಿ ಶೋಕಾಚರಣೆ ಮಾಡುತ್ತಿದ್ದರೆ ಸಮಾಜ ಕಲ್ಯಾಣ ಇಲಾಖೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮ ಆಯೋಜಿಸಿದ್ದು ಖಂಡನಾರ್ಹ. ಶೋಕಾಚರಣೆ ಸಂದರ್ಭದಲ್ಲಿ ಕನ್ಹಯ್ಯಕುಮಾರ್‌, ಅಸಾಉದ್ದೀನ್‌ ಓವೈಸಿ ಅವರಂತಹವರನ್ನು ಆಹ್ವಾನಿಸಿರುವುದರ ಹಿಂದಿನ ರಹಸ್ಯ ಕಾರ್ಯಸೂಚಿ ಇದೆ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಯವರ ಅಂತಿಮ ಕ್ರಿಯಾವಿಧಿಗಳು ಇನ್ನೂ ಮುಗಿದಿಲ್ಲ. ಆದರೂ ಇಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಸ್ವಾಮೀಜಿ ಮತ್ತು ಕರ್ನಾಟಕದ ಜನತೆಗೆ ಮಾಡಿದ ಅವಮಾನ. ಹಾಗಾಗಿ ನಾನು ಕಾರ್ಯಕ್ರಮ ಬಹಿಷ್ಕರಿಸಿದ್ದೇನೆ.
● ಗೋ. ಮಧುಸೂಧನ್‌, ಬಿಜೆಪಿ ರಾಜ್ಯ ವಕ್ತಾರ

ರಾಜ್ಯದಲ್ಲಿ ಶೋಕಾಚರಣೆ ಇದ್ದರೂ ಸಂವಿಧಾನದ ಸಂಭಾಷಣೆ ಹೆಸರಿನಲ್ಲಿ ಸಂವಾದ ಆಯೋಜಿಸಿ ಸಿದಟಛಿಗಂಗಾ ಶ್ರೀಗಳಿಗೆ ಅಗೌರವ ತೋರುವ ಮೂಲಕ ಕಾಂಗ್ರೆಸ್‌ ಅಕ್ಷಮ್ಯ ಅಪರಾಧ ಎಸಗಿದೆ.
● ಲೆಹರ್‌ಸಿಂಗ್‌, ವಿಧಾನಪರಿಷತ್‌ ಸದಸ್ಯ

ಸಂವಾದ: ಆಕ್ರೋಶ

ಬೆಂಗಳೂರು: ಇಡೀ ದೇಶ ಸಿದಟಛಿಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಅಗಲಿಕೆಯ ನೋವಿನಲ್ಲಿ ಶೋಕಾಚರಣೆ ಮಾಡುತ್ತಿದ್ದರೆ ಸಮಾಜ ಕಲ್ಯಾಣ ಇಲಾಖೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮ ಆಯೋಜಿಸಿದ್ದು ಖಂಡನಾರ್ಹ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಶೋಕಾಚರಣೆ ಸಂದರ್ಭದಲ್ಲಿ ಕನ್ಹಯ್ಯಕುಮಾರ್‌, ಅಸಾದ್ದೀನ್‌ ಓವೈಸಿ ಅವರಂತಹ ವಿವಾದಿತ ನಾಯಕರನ್ನು ಆಹ್ವಾನಿಸಿರುವುದರ ಹಿಂದಿನ ರಹಸ್ಯ ಕಾರ್ಯಸೂಚಿಯೇ ಬೇರೆ ಎನ್ನುವುದು ಸಾಬೀತಾಗಿದೆ. ಇದಕ್ಕಿಂತ ಮಿಗಿಲಾಗಿ ದೇಶದ ಬಡವರ್ಗದ ಜನರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ ಎಂದು ಅವರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next