ಲಂಡನ್: ಬರೋಬ್ಬರಿ 70 ವರ್ಷಗಳ ಕಾಲ ಇಂಗ್ಲೆಂಡ್ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್(96) ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಅಕ್ಟೋಬರ್‌ನಿಂದ ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಮಂಗಳವಾರ ಲಿಜ್ ಟ್ರಾಸ್ ಅವರನ್ನು ನೂತನ ಪ್ರಧಾನಿಯಾಗಿ ಅಧಿಕೃತವಾಗಿ ನೇಮಕ ಮಾಡಿದ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ರಾಣಿ ಭಾಗಿಯಾಗಿದ್ದರು. ಅದರ ಬೆನ್ನಲ್ಲೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಗುರುವಾರ ಸ್ಕಾಟ್ಲೆಂಡ್‌ನಲ್ಲಿರುವ ನಿವಾಸದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ತಡರಾತ್ರಿ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಬಕಿಂಗ್‌ಹ್ಯಾಂ ಅರಮನೆ ತಿಳಿಸಿದೆ.
ರಾಣಿ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅರಮನೆಯ ವೈದ್ಯರ ಸಲಹೆ ಮೇರೆಗೆ, 2ನೇ ಎಲಿಜಬೆತ್ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸ್ಕಾಟ್ಲೆಂಡ್‌ನ ಬಲ್ಮೋರಾಲ್‌ನ ನಿವಾಸಕ್ಕೆ ಧಾವಿಸಿದ್ದರು. ಶುಕ್ರವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಲಂಡನ್‌ಗೆ ಒಯ್ಯಲಾಗುತ್ತದೆ. ಯುಕೆಯಾದ್ಯಂತ 10 ದಿನಗಳ ಶೋಕಾಚರಣೆ ನಡೆಯಲಿದೆ. 2ನೇ ಎಲಿಜಬೆತ್ ಅವರು 1952ರ ಫೆ. 6ರಂದು ತಮ್ಮ 25ನೇ ವಯಸ್ಸಿನಲ್ಲಿ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕಾರಾವಧಿಯಲ್ಲಿ 15 ಪ್ರಧಾನಿಗಳನ್ನು ನೋಡಿದ್ದಾರೆ. ವಿನ್‌ಸ್ಟನ್ ಚರ್ಚಿಲ್‌ರಿಂದ ಲಿಜ್ ಟ್ರಾಸ್‌ವರೆಗೆ ಪ್ರಧಾನಿಗಳ ನೇಮಕವನ್ನು ಇವರು ಮಾಡಿದ್ದರು.
ರಾಣಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನಿ ಲಿಜ್ ಟ್ರಾಸ್ ಸೇರಿದಂತೆ ಅನೇಕ ವಿಶ್ವನಾಯಕರು ಕಂಬನಿ ಮಿಡಿದಿದ್ದಾರೆ.
ಪುತ್ರ ರ್ಲ್ಸ್ ಗೆ ಪಟ್ಟ :
2ನೇ ಎಲಿಜಬೆತ್ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರ, ವೇಲ್ಸ್‌ನ ಮಾಜಿ ರಾಜಕುಮಾರ ಚಾರ್ಲ್ಸ್ ಅವರು “ರಾಜ’ನಾಗಿ ಪಟ್ಟಕ್ಕೇರಲಿದ್ದಾರೆ.