ಎನ್.ಆರ್.ಪುರ: ಮನೆಯಲ್ಲಿ ಜಗಳ ಮಾಡಿಕೊಂಡು ಕಳೆದ ಎರಡೂವರೆ ವರ್ಷದ ಹಿಂದೆ ಊರು ತೊರೆದಿದ್ದ ಮಹಿಳೆಯೊಬ್ಬರು ಕೊನೆಗೂ ಮರಳಿ ತನ್ನ ಮನೆ ಸೇರಿದ್ದಾರೆ.
ತಮಿಳುನಾಡು ಮೂಲದ ಸೆಲ್ವಿ ವೆಂಕಟೇಶ್ ಕಳೆದ 15 ದಿನದ ಹಿಂದೆ ಎನ್.ಆರ್.ಪುರಕ್ಕೆ ಬಂದಿದ್ದು ಸೋಮವಾರ ಇವರನ್ನು ಸಂಬಂಧಿಕರ ಸುಪರ್ದಿಗೆ ನೀಡಲಾಯಿತು.
ತಮಿಳುನಾಡಿನ ಕಡಲೂರು ಜಿಲ್ಲೆ ವಿರುವಾಚಲಂ ತಾಲೂಕಿನ ನೈವೇಟಿಯ ಸೆಲ್ವಿ ಮನೆಯಲ್ಲಿ ಜಗಳವಾಡಿ ಊರು ಬಿಟ್ಟು ಬಂದಿದ್ದರು. ಬರಿ ಕಾಲಿನಲ್ಲಿ ಊರಿಂದ ನಡೆಯುತ್ತ ಹೊರಟ ಈಕೆ ಕರ್ನಾಟಕದ ಕೆಲವು ಭಾಗಗಳಲ್ಲಿ ಸುತ್ತಾಡಿದ್ದಾಳೆ. ಯಾರ ಬಳಿಯೂ ಹಣ ಕೇಳದೆ, ಹಸಿದಾಗ ಊಟ ಕೇಳುತ್ತಾ,ಸುಮಾರು 680 ಕಿ.ಮೀ ದೂರ ನಡೆದ ಈಕೆ ಕಳೆದ 15 ದಿನದ ಹಿಂದೆ ಎನ್.ಆರ್. ಪುರಕ್ಕೆ ಬಂದು ಇಲ್ಲಿಯೇ ಉಳಿದಿದ್ದರು.
ಈ ಮಹಿಳೆಯನ್ನು ಗಮನಿಸಿದ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆ, ಭಾರತೀಯ ಮಾನವ ಹಕ್ಕು ಸಂರಕ್ಷಣಾ ಸದಸ್ಯರು ಮತ್ತಿಮರದ ಅನಾಥಶ್ರಮಕ್ಕೆ ಸೇರಿಸಲು ಮುಂದಾಗಿದ್ದಾರೆ. ಆಗ ಈಕೆ ಮನೆ ಬಿಟ್ಟು ಬಂದಿದ್ದು ವಾಪಸ್ ಊರಿಗೆ ತೆರಳಲು ಆಗದ ಸ್ಥಿತಿಯ ಬಗ್ಗೆ ವಿವರಿಸಿದ್ದಾಳೆ.
ಈ ಮಹಿಳೆಯನ್ನು ಅವರ ಮನೆಗೆ ಸೇರಿಸುವ ನಿರ್ಧಾರ ಕೈಗೊಂಡ ಸಂಘಟನೆಗಳ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.ಮಾನವ ಹಕ್ಕು ಸಂರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷೆ ಜುಬೇದಾ ಮನೆ ತೊರೆದು ಬಂದ ಮಹಿಳೆಯ ಫೋಟೋ ಹಾಗೂ ವಿವರವನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್ ನಲ್ಲಿ ಪ್ರಕಟಿಸಿದ್ದರು. ತಮಿಳುನಾಡಿನಲ್ಲಿರುವ
ಜುಬೇದಾರವರ ಸ್ನೇಹಿತರು ಇದನ್ನು ನೋಡಿ ಮಹಿಳೆಯ ಊರನ್ನು ಪತ್ತೆಹಚ್ಚಿ ಅವರ ಸಂಬಂಧಿಕರಿಗೆ ನಡೆದಿರುವ ವಿಚಾರ ತಿಳಿಸಿದ್ದಾರೆ.
ಅದರಂತೆ ಸೆಲ್ವಿ ಅವರ ಸಂಬಂಧಿಕರು ಸೋಮವಾರ ಎನ್.ಆರ್.ಪುರಕ್ಕೆ ಆಗಮಿಸಿ ತಮ್ಮೊಂದಿಗೆ ಕರೆದುಕೊಂಡು ಊರಿಗೆ ತೆರಳಿದ್ದಾರೆ. 12 ದಿನಗಳ ಕಾಲ ಸೆಲ್ವಿಯ ಲಾಲನೆ ಪೋಷಣೆ ಮಾಡಿದ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆಯ
ತಾಲೂಕು ಅಧ್ಯಕ್ಷ ಮತ್ತು ತಂಡದವರು, ಆಟೋ ಹರೀಶ್ ಮತ್ತು ಜುಬೇದಾರವರಿಗೆ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ. 12 ದಿನಗಳ ಕಾಲ ಆ ಅನಾಥ ಮಹಿಳೆಗೆ ಊಟ, ತಿಂಡಿ ವ್ಯವಸ್ಥೆ ಮಾಡಿಕೊಟ್ಟ ಪಿ.ಎಸ್.ಐ ರವಿ ನಿಡಗಟ್ಟರನ್ನುಧ್ರುವತಾರೆ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ದೇವರಾಜ್, ಆಯೋಗದ ಮಹಿಳಾ ಅಧ್ಯಕ್ಷೆ ಜುಬೇದಾ ಅಭಿನಂದಿಸಿದರು.