ವಿಜಯಪುರ: ತಾನು ಮಾಡಿದ ಸಾಲ ತೀರಿಸಲು ಹೊಲ ಮಾರುವುದಕ್ಕೆ ಹೆಂಡತಿ ತಕರಾರು ಮಾಡಿದ್ದಕ್ಕೆ ಆಕ್ರೋಶಗೊಂಡ ತಂದೆಯೇ ಮಕ್ಕಳಿಗೆ ಅನ್ನದಲ್ಲಿ ವಿಷವಿಟ್ಟು ಘಟನೆ ಗುರುವಾರ ನಡೆದಿದ್ದು, ಎರಡೂವರೆ ವರ್ಷದ ಮಗು ಸಾವನ್ನಪ್ಪಿದ್ದು, ನ್ನೋರ್ವ ಮಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಂದ್ರಶೇಖರ ಅರಸನಾಳ ಎಂಬಾತ ಕೃತ್ಯ ಎಸಗಿದ್ದು, ಮಗ ಶಿವರಾಜ ಸಾವನ್ನಪ್ಪಿದ್ದು, 5 ವರ್ಷದ ಮಗಳು ರೇಣುಕಾ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ದುಸ್ಥಿತಿಗೆ ನನ್ನ ಗಂಡ ಚಂದ್ರಶೇಖರ ನೀಡಿದ ವಿಷ ಬೆರಸಿದ ಅನ್ನ ತಿಂದದ್ದೇ ಕಾರಣ ಎಂದು ಮಕ್ಕಳ ತಾಯಿ ಸಾವಿತ್ರಿ ದೂರು ನೀಡಿದ್ದಾರೆ.
ವಿಪರೀತ ಸಾಲ ಮಾಡಿಕೊಂಡಿದ್ದ ನನ್ನ ಪತಿ ಚಂದ್ರಶೇಖರ ಸ್ವಗ್ರಾಮ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿ ಇರುವ ಜಮೀನು ಮಾರಾಟಕ್ಕೆ ಮುಂದಾಗಿದ್ದ. ಮಾಡಿದ ಸಾಲವನ್ನು ದುಡಿದು ತೀರಿಸೋಣ ಜಮೀನು ಮಾರುವುದು ಬೇಡ ಎಂದು ವಿರೋಧಿಸಿದ್ದೆ. ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದಲ್ಲಿದ್ದಾಗ ಜೂ. 2 ರಂದು ತನ್ನ ಸಹೋದರರಾದ ಬಸಪ್ಪ, ಗುಂಡಪ್ಪ, ಮೌನೇಶ ಜೊತೆ ಅಲ್ಲಿಗೆ ಆಗಮಿಸಿದ್ದ ಪತಿ ಚಂದ್ರಶೇಖರ ಜಮೀನು ಮಾರಲು ನನ್ನ ಮನವೊಲಿಸಲು ಮುಂದಾದರೂ ನಾನು ಒಪ್ಪಿರಲಿಲ್ಲ. ಹೀಗಾಗಿ ನನ್ನ ಭಾವಂದಿರು ಊರಿಗೆ ಮರಳಿದರೂ ಪತಿ ನನ್ನ ತವರೂರಲ್ಲೇ ಉಳಿದಿದ್ದರು ಎಂದು ಹೇಳಿಕೊಂಡಿದ್ದಾರೆ.
ಜಮೀನು ಮಾರಲು ಒಪ್ಪದ ಕಾರಣಕ್ಕೆ ಸಿಟ್ಟಿನಲ್ಲಿ ನನ್ನನ್ನು ಹಾಗೂ ಮಕ್ಕಳನ್ನು ಕೊಲೆ ಮಾಡುವ ಸಂಚು ರೂಪಿಸಿದ ಪತಿ ಚಂದ್ರಶೇಖರ ಸಂಜೆ ಹೊರಗಿನಿಂದ ವಿಷ ಹಾಕಿದ ಎಗ್ ರೈಸ್ ತಂದು ಕೊಟ್ಟಿದ್ದ. ಇದನ್ನು ಮಕ್ಕಳಿಗೆ ತಿನ್ನಿಸಿದ ಕಾರಣ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಕೂಡಲೇ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಎರಡೂವರೆ ವರ್ಷದ ಮಗ ಶಿವರಾಜ ಮೃತಪಟ್ಟಿದ್ದಾನೆ. ತೀವ್ರ ಅಸ್ವಸ್ಥಳಾದ ಮಗಳು ರೇಣುಕಾ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ.
ಘಟನೆಯ ಬಳಿಕ, ಪತಿ ಚಂದ್ರಶೇಖರ ಸಾಲದ ಭೀತಿಯಿಂದ ನನಗೆ ಹಾಗೂ ಮಕ್ಕಳಿಗೆ ವಿಷ ಬೆರೆಸಿದ ಎಗ್ ರೈಸ್ ನೀಡಿ ಕೊಲೆ ಮಾಡಿ, ಬಳಿಕ ತಾನೂ ಸಾಯಲು ಯೋಜಿಸಿದ್ದಾಗಿ ನನಗೆ ತಿಳಿಸಿದ್ದಾನೆ ಎಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ತಾಳಿಕೋಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.