ರಾಯಚೂರು: ಹಸಿರು ವಲಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿರುವುದರಿಂದ ಅಂತಾರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ಹದ್ದಿನ ಕಣ್ಣಿಡಬೇಕು. ಹೊರ ಜಿಲ್ಲೆ, ರಾಜ್ಯಗಳಿಂದ ಯಾರೇ ಬರಲಿ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ನಿರ್ದೇಶನ ನೀಡಿದರು. ಗುಜರಾತ್‌ನ ಅಹಮದಾಬಾದ್, ನವದೆಹಲಿ, ಅಜ್ಮೇರ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ವಲಸೆ ಹೋದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿರುಗುತ್ತಿದ್ದಾರೆ. ಅಂತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ಹೆಚ್ಚಿನ ನಿಗಾವಹಿಸಿ ಅವರ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಅಂಥವರನ್ನು 14 ದಿನ ಕ್ವಾರಂಟೈನ್‌ನಲ್ಲಿಡಬೇಕು ಎಂದರು.
ಕ್ವಾರಂಟೈನ್‌ನಲ್ಲಿದ್ದವರ ಕುಟುಂಬ ಸಮೇತ ಮಾದರಿ ಸಂಗ್ರಹಿಸಬೇಕು. ಗಿಲ್ಲೆಸೂಗುರು, ಲಿಂಗಸುಗೂರು, ತಿಂಥಿಣಿ ಬ್ರಿಜ್ ಬಳಿ ಬಳಿಮಾದರಿ ಸಂಗ್ರಹ ಘಟಕ ಸ್ಥಾಪಿಸಲಾಗಿದೆ. ಕಳೆದ 3-4 ದಿನದಲ್ಲಿ 1500 ಬಸ್ ಮೂಲಕ ಅಂತರ ರಾಜ್ಯಗಳಿಂದ ಸಾವಿರಾರು ಜನ ಜಿಲ್ಲೆಗೆ ಆಗಮಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ ನಿತ್ಯ 200 ಸ್ಯಾಂಪಲ್ ಸಂಗ್ರಹಿಸಬೇಕು ಎಂದರು.
ಮಳೆಗಾಲ ಶುರುವಾಗುತ್ತಿದ್ದು, ಕೋವಿಡ್ ಜತೆಗೆ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ತಹಶೀಲ್ದಾರ್ ನೋಡಲ್ ಅಧಿಕಾರಿಗಳನ್ನು ನೇಮಿಸಿ ಸ್ವಚ್ಛತೆಗೆ ಒತ್ತು ಕೊಡಬೇಕು. ರಾಜ್ಯದ ಅನ್ಯ ಜಿಲ್ಲೆಗಳಲ್ಲಿರುವ ಕಾರ್ಮಿಕರು, ಉದ್ಯೋಗಿಗಳನ್ನು ಕರೆತರಲು ಜಿಲ್ಲಾಡಳಿತ ಈವರೆಗೂ ಎಷ್ಟು ಜನರಿಗೆ ಪಾಸ್ ನೀಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ನಗರದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಲೀಕರಿಗೆ ನೋಟಿಸ್ ನೀಡಬೇಕು. ನಿಯಮ ಮೀರಿದ ಎಷ್ಟು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸುವಂತೆ ಎಡಿಸಿಗೆ ಸೂಚಿಸಿದರು.
ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಅಜ್ಮೇರಕ್ಕೆ ಹೋಗಿ ಬಂದವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅಂಥವರನ್ನು ಗುರುತಿಸಬೇಕು. ಯಾದಗಿರಿ ಮತ್ತು ಸುರಪುರ ತಾಲೂಕಿನಲ್ಲಿ ಈಗಾಗಲೇ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಅಂತರ ರಾಜ್ಯಗಳ ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣು ಇಡುವಂತೆ ಸೂಚಿಸಿದರು.
ಜಿಪಂ ಸಿಇಒ ಜಿ.ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ದುರುಗೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಎಸಿ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಹಂಪಣ್ಣ, ನಗರಸಭೆ ಪೌರಾಯುಕ್ತ ದೊಡ್ಡಮನಿ, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.