Advertisement

ಭಾರತದ ಆಟಗಾರರಿಗೆ ಕ್ವಾರಂಟೈನ್‌ ಕಡ್ಡಾಯ

08:29 AM May 10, 2020 | Sriram |

ಹೊಸದಿಲ್ಲಿ: ಜಾಗತಿಕ ಕ್ರಿಕೆಟ್‌ ಋತು ಯಾವಾಗ ಆರಂಭ ವಾಗುತ್ತದೋ ಬಲ್ಲವರಿಲ್ಲ. ಆದರೆ ವರ್ಷಾಂತ್ಯದ ಭಾರತ-ಆಸ್ಟ್ರೇಲಿಯ ನಡುವಿನ ಅತ್ಯಂತ ಮಹತ್ವದ ಸರಣಿಯನ್ನು ಸಂಘಟಿಸಲು ಎರಡೂ ಕ್ರಿಕೆಟ್‌ ಮಂಡಳಿಗಳು ತುದಿಗಾಲಲ್ಲಿ ನಿಂತಿವೆ. ಈ ಪ್ರವಾಸ ನಡೆಯದೇ ಹೋದರೆ ತನಗೆ ಭಾರೀ ನಷ್ಟವಾಗಲಿದೆ ಎಂದು “ಕ್ರಿಕೆಟ್‌ ಆಸ್ಟ್ರೇಲಿಯ’ ಈಗಾ ಗಲೇ ಲೆಕ್ಕ ಒಪ್ಪಿಸಿದೆ.

Advertisement

ಅಕಸ್ಮಾತ್‌ ಟೀಮ್‌ ಇಂಡಿಯಾ ಈ ಪ್ರವಾಸ ಕೈಗೊಳ್ಳುವುದೇ ಆದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ “ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದರಲ್ಲಿ ಕ್ವಾರಂಟೈನ್‌ ಪ್ರಕ್ರಿಯೆ ಕೂಡ ಸೇರಿದೆ. ಆಸ್ಟ್ರೇಲಿಯಕ್ಕೆ ಕಾಲಿಟ್ಟೊಡನೆ ಭಾರತ ತಂಡದ ಕ್ರಿಕೆಟಿಗರಿಗೆ 2 ವಾರಗಳ ಕ್ವಾರಂಟೈನ್‌ ಮಾಡಲಾಗುವುದು ಎಂದು ಧುಮಾಲ್‌ ಸ್ಪಷ್ಟಪಡಿಸಿದರು.

“ನಮ್ಮ ಮುಂದೆ ಬೇರೆ ದಾರಿಯೇ ಇಲ್ಲ. ಕ್ರಿಕೆಟನ್ನು ಮುಂದುವರಿಸಬೇಕಾದರೆ ಎಲ್ಲರೂ ಆರೋಗ್ಯ ನಿಯಮವನ್ನು ಪಾಲಿಸಲೇ ಬೇಕಾಗುತ್ತದೆ. ಎರಡು ವಾರಗಳ ಕ್ವಾರಂಟೈನ್‌ ದೊಡ್ಡ ಸಂಗತಿಯಲ್ಲ. ಇಲ್ಲಿ ಇಷ್ಟು ದಿನಗಳ ಕಾಲ ಲಾಕ್‌ಡೌನ್‌ನಲ್ಲಿದ್ದು, ವಿದೇಶಕ್ಕೆ ತೆರಳಿದ ಬಳಿಕ 2 ವಾರಗಳ ಕ್ವಾರಂಟೈನ್‌ಗೆ ಒಳಗಾಗುವುದು ಸಮಸ್ಯೆಯೇನಲ್ಲ’ ಎಂದು ಧುಮಾಲ್‌ ಹೇಳಿದರು.

ಈ ಪ್ರವಾಸದ ವೇಳೆ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಾಗುವುದು. ಆದರೆ ಇಷ್ಟೊಂದು ಸಂಖ್ಯೆಯ ಟೆಸ್ಟ್‌ ಪಂದ್ಯಗಳನ್ನು ಆಡಬೇಕೇ ಅಥವಾ ಹೆಚ್ಚುವರಿಯಾಗಿ ಏಕದಿನ ಅಥವಾ ಟಿ20 ಪಂದ್ಯಗಳನ್ನು ನಡೆಸಬೇಕೇ ಎಂಬ ಕುರಿತು ಗೊಂದಲವಿದೆ. ಇದನ್ನು ಕೂಡಲೇ ಬಗೆಹರಿಸಬೇಕು ಎಂದು ಧುಮಾಲ್‌ ಹೇಳಿದರು. ಆದಾಯದ ದೃಷ್ಟಿಯಲ್ಲಿ ಹೆಚ್ಚು ಟೆಸ್ಟ್‌ ಆಡುವ ಬದಲು ಏಕದಿನ, ಟಿ20 ಪಂದ್ಯಗಳನ್ನು ಆಡುವುದೇ ಒಳ್ಳೆಯದು ಎಂಬ ಅಭಿಪ್ರಾಯ ಕ್ರಿಕೆಟ್‌ ಆಸ್ಟ್ರೇಲಿಯದ್ದು.

ಪ್ರೇಕ್ಷಕರಿಲ್ಲದಿದ್ದರೆ ಕ್ರಿಕೆಟ್‌
ಮಜಾ ಇಲ್ಲ: ಕೊಹ್ಲಿ
ಇದೇ ವೇಳೆ ಕೋವಿಡ್-19 ಬಳಿಕ ಕ್ರಿಕೆಟ್‌ ಪಂದ್ಯಗಳನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಬಹುದು, ಆದರೆ ಪ್ರೇಕ್ಷಕರು ಇಲ್ಲದೇ ಹೋದರೆ ಆಟಕ್ಕೆ ಮಜಾ ಇಲ್ಲ ಎಂಬುದಾಗಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

“ನಾವೆಲ್ಲ ಸಾವಿರಾರು ಅಭಿಮಾನಿ ವೀಕ್ಷಕರ ಸಮ್ಮುಖದಲ್ಲಿ ಆಡುತ್ತ ಬಂದವರು. ನಮಗೆ ಅವರೇ ಸ್ಫೂರ್ತಿ. ನಮ್ಮೆಲ್ಲ ಭಾವನೆಗಳು ಅಡಗಿರುವುದೇ ವೀಕ್ಷಕರ ಪ್ರತಿಕ್ರಿಯೆ ಮೇಲೆ. ಆದರೆ ವೀಕ್ಷಕರೇ ಇಲ್ಲವೆಂದರೆ ಕ್ರಿಕೆಟಿನ ನೈಜ ಮಜಾ ಕೂಡ ಇರದು’ ಎಂದು ಕೊಹ್ಲಿ “ಕ್ರಿಕೆಟ್‌ ಕನೆಕ್ಟೆಡ್‌’ ಕಾರ್ಯಕ್ರಮದ ವೇಳೆ ಹೇಳಿದರು.

ಈಗಾಗಲೇ ಬೆನ್‌ ಸ್ಟೋಕ್ಸ್‌, ಜಾಸನ್‌ ರಾಯ್‌, ಜಾಸ್‌ ಬಟ್ಲರ್‌, ಪ್ಯಾಟ್‌ ಕಮಿನ್ಸ್‌ ಮೊದಲಾದವರೆಲ್ಲ ವೀಕ್ಷಕರಿಲ್ಲದ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಡಿಸುವ ಬಗ್ಗೆ ಒಲವು ತೋರಿದ್ದಾರೆ. ಆದರೆ ಆಸ್ಟ್ರೇಲಿಯದ ಮಾಜಿ ನಾಯಕ ಅಲನ್‌ ಬೋರ್ಡರ್‌ ಇದಕ್ಕೆ ವಿರೋಧವಾಗಿದ್ದಾರೆ. ಪ್ರೇಕ್ಷರಿಲ್ಲದೆ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆದೀತೆಂಬುದನ್ನು ನಂಬಲಿಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.

ಆಸ್ಟ್ರೇಲಿಯದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಅಲನ್‌ ಬೋರ್ಡರ್‌ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.