Advertisement

ಕ್ವಾರಂಟೈನ್‌: ಆತ್ಮಸ್ಥೈರ್ಯ ತುಂಬಲು ಕೌನ್ಸಿಲಿಂಗ್‌

04:51 PM Apr 27, 2020 | mahesh |

ಮಂಡ್ಯ: ಕೋವಿಡ್ ಸಂಬಂಧ ಪಬ್ಲಿಕ್‌ ಕ್ವಾರಂಟೈನ್‌ನಲ್ಲಿರುವವರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ಸೋಂಕಿನ ಬಗ್ಗೆ ಖನ್ನತೆಗೆ ಒಳಗಾಗದಂತೆ ಹಾಗೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯ ತುಂಬುತ್ತಿದ್ದಾರೆ. ನಂಜನಗೂಡಿನ ಜ್ಯುಬಿಲಿಯೆಂಟ್‌ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರು , ಅವರ ಕುಟುಂಬದವರನ್ನು ನಗರದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಪಬ್ಲಿಕ್‌ ಕ್ವಾರಂಟೈನ್‌ ಮಾಡಲಾಗಿತ್ತು. ಏಳು ಮಂದಿಯ ಪೈಕಿ ಇಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ
ಅವರನ್ನು ಮಿಮ್ಸ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ತಿಳಿಸಿದರು.

Advertisement

ಮುಂಜಾಗ್ರತೆ ಅನುಸರಿಸಿ: ಉಳಿದ ಐದು ಮಂದಿಯ ಪೈಕಿ ಓರ್ವನಿಗೆ ಜ್ವರ ಕಾಣಿಸಿಕೊಂಡಿದ್ದು, ಆತನನ್ನೂ ಮಿಮ್ಸ್‌ ಆಸ್ಪತ್ರೆಯಲ್ಲಿರುವ ಐಸೋಲೇಷನ್‌ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಉಳಿದವರಲ್ಲಿ ಭಯ, ಆತಂಕ ಎದುರಾಗಿದೆ. ಅವರಿಗೆ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡರೇ ಪ್ರತಿದಿನ ಖುದ್ದು ಭೇಟಿ ನೀಡಿ ಭಯ, ಆತಂಕ ದೂರ ಮಾಡಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಿತ್ಯ ಅರ್ಧ ಗಂಟೆಯಿಂದ ಒಂದು ಗಂಟೆವರೆಗೂ ಕ್ವಾರಂಟೈನ್‌ನಲ್ಲಿ ಇರುವವರೊಂದಿಗೆ ಬೆರೆತು ಅವರ ಸಮಸ್ಯೆ ಕೇಳಿ ಪರಿಹರಿಸುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೋವಿಡ್ ಸೋಂಕಿನಿಂದ ದೂರವಿರಲು ಮತ್ತು ಹೊರ ಬರಲು ಪ್ರಯತ್ನಿಸಬೇಕು ಎಂದು ಅವರಲ್ಲಿ ಆತ್ಮವಿಶ್ವಾಸ ತುಂಬಿದರು.

ಮನೆಯಿಂದಲೂ ಊಟ ವ್ಯವಸ್ಥೆ: ಸೋಂಕಿತರು ವಾಸ್ತವ್ಯ ಹೂಡಿದ್ದ ಕೊಠಡಿಯಲ್ಲೇ ಇರು ವ ಕಾರಣ ನಮಗೂ ಸೋಂಕು ಹರಡಬಹುದು ಎಂಬ ಭಯ ಅವರಲ್ಲಿ ಮೂಡಿದೆ. ಕೊಠಡಿ ಬದಲಾವಣೆಗೆ ಜಿಲ್ಲಾಧಿಕಾರಿಗೆ ತಿಳಿಸಿದ್ದು ಆದೇಶ ಬಂದ ನಂತರ ಅವರನ್ನು ಬೇರೆಡೆಗೆ ವರ್ಗಾಯಿಸಲು ಚಿಂತನೆ ನಡೆಸಲಾಗಿದೆ. ನಿತ್ಯ ಹಾಸ್ಟೆಲ್‌ಗೆ ತಹಶೀಲ್ದಾರ್‌ ಭೇಟಿ ನೀಡಿ
ಪರಿಶೀಲಿಸುತ್ತಿದ್ದಾರೆ. ಅವರಿಗೆ ನೀಡುವ ಊಟೋಪಚಾರದಲ್ಲೂ ಬದಲಾವಣೆ ಬೇಕಿದ್ದರೆ ಮಾಡಲಾಗುವುದು. ಬಯಸಿದರೆ ಮನೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅವರಲ್ಲಿ ಧೈರ್ಯ ತುಂಬಿದರು.

ಸ್ವಚ್ಛತೆಗೆ ಆದ್ಯತೆ: ನಗರಸಭೆಯ ಸ್ವಚ್ಛತಾ ಕಾರ್ಯಕರ್ತರು ಕೊಠಡಿಗಳು ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ವೈದ್ಯರು ಆಗಾಗ ಭೇಟಿ ನೀಡಿ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಕ್ವಾರಂಟೈನಲ್ಲಿರುವವರಲ್ಲಿ ತುಂಬಾ ಭಯ ಆವರಿಸಿಕೊಂಡಿದೆ. ಅವರಲ್ಲಿರುವ ಆತಂಕ ದೂರ ಮಾಡಲು, ಖನ್ನತೆ ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬಲು ಮನೋವೈದ್ಯರಿಂದ
ಕೌನ್ಸಿಲಿಂಗ್‌ ಮಾಡಿಸಲಾಗುತ್ತಿದೆ.
● ಡಾ.ಮಂಚೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next