ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ವಿಳಂಬ ಮಾಡದೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ತಿಳಿಸಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಸಾರ್ವ ಜನಿಕರೋರ್ವರು ಪೊಲೀಸರಿಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅಧೀಕ್ಷಕರು ಈ ಹೇಳಿಕೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆ 175 ವರ್ಷಗಳಿಂದ ದಕ್ಷಿಣ ಕನ್ನಡ ಮಾತ್ರವಲ್ಲದೆ ಸುತ್ತಲಿನ ಏಳೆಂಟು ಜಿಲ್ಲೆಗಳು ಮತ್ತು ನೆರೆಯ ಕೇರಳ ರಾಜ್ಯದ ರೋಗಿಗಳಿಗೂ ಸಮರ್ಪಕ ಸೇವೆ ಸಲ್ಲಿಸುತ್ತಿದೆ. ತುರ್ತು ಚಿಕಿತ್ಸೆಗೆ ಮೂಲ ಸೌಕರ್ಯಗಳು ಲಭ್ಯವಿದೆ.
ಮಾ.18ರಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯನಿರತ ವೈದ್ಯಾಧಿಕಾರಿ, ಕೆಎಂಸಿ ತಜ್ಞ ವೈದ್ಯರು, ಶುಶ್ರೂಷಾಧಿಕಾರಿಗಳು ಮತ್ತು ಸಿಬಂದಿ ಕರ್ತವ್ಯದಲ್ಲಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ತತ್‌ಕ್ಷಣವೇ ತುರ್ತುಚಿಕಿತ್ಸೆ ನೀಡಲಾಗಿದೆ. ರೋಗಿ ಚೇತರಿಸಿ ಕೊಂಡಿದ್ದಾರೆ. ವೆನ್ಲಾಕ್ ನಲ್ಲಿ ಕ್ಯಾಶು ವಲ್ಟಿ ಕ್ರಿಟಿಕಲ್ ಕೇರ್ ಏರಿಯಾದಲ್ಲಿ 6 ಬೆಡ್‌ಗಳು, ಎಕ್ಸ್‌ಟೆಂಡೆಡ್ ಕ್ಯಾಶುವಲ್ಟಿಯಲ್ಲಿ 8 ಬೆಡ್‌ಗಳು ಹಾಗೂ ಕ್ಯಾಶುವಲ್ಟಿ ಎಮರ್ಜೆನ್ಸಿ ಐಸಿ ಯು ನಲ್ಲಿ 12 ಬೆಡ್‌ಗಳಿದ್ದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಬೆಡ್‌ಗಳ ಕೊರತೆ ಇಲ್ಲ ಎಂದವರು ತಿಳಿಸಿದ್ದಾರೆ.
ಕೆಲವೊಮ್ಮೆ ಅಂತರ್ಜಾಲ, ಸರ್ವರ್ ತೊಂದರೆಯಿಂದಾಗಿ ಹೊರ ರೋಗಿಗಳಿಗೆ ಚೀಟಿ ನೀಡಲು ವಿಳಂಬವಾಗುತ್ತಿದ್ದು ಮ್ಯಾನುವಲ್ ಎಂಟ್ರಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆಯು ಕಸ್ತೂರ್ಬಾ ಮೆಡಿಕಲ್ ಕಾಲೇಜಿನೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸರಕಾರಿ ತಜ್ಞ ವೈದ್ಯರು, ಕೆಎಂಸಿ ತಜ್ಞ ವೈದ್ಯರು, ಸ್ನಾತಕೋತ್ತರ ವೈದ್ಯರು ಹಾಗೂ ಎಂಬಿಬಿಎಸ್ ಗೃಹ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಗೆ ಬರುವ ಹೃದಯ ಸಂಬಂಧಿ ರೋಗಿಗಳಿಗೆ ತುರ್ತು ಚಿಕಿತ್ಸೆಯನ್ನು ನೀಡಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾ ಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡ ಲಾಗು ತ್ತಿದೆ. 2024-25ನೇ ಸಾಲಿನಲ್ಲಿ ಕೆಎಂಸಿ ವತಿಯಿಂದ ಕ್ಯಾಥ್‌ಲ್ಯಾಬ್ ನಿರ್ಮಿಸಲು ಒಪ್ಪಿಕೊಂಡಿದ್ದು ಹೊಸ ಸರ್ಜಿಕಲ್ ನೆಲ ಅಂತಸ್ತಿನಲ್ಲಿ ಕ್ಯಾಥ್‌ಲ್ಯಾಬ್ ಸೇವೆ ಆರಂಭಿಸ ಲಾಗುವುದು. ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳ ಚಿಕಿತ್ಸೆಗೆ ಔಷಧ, ವೈದ್ಯಕೀಯ ಉಪಕರಣಗಳು, ಗಾಲಿ ಕುರ್ಚಿಗಳು ಹಾಗೂ ಆಕ್ಸಿಜನ್ ಟ್ರಾಲಿಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ರೋಗಿಗಳ ಪರಿಚಾರಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.