Advertisement

ಗುಣಮಟ್ಟದಿಂದ ಯಶಸ್ವಿಯಾದ ಹಾಪ್‌ಕಾಮ್ಸ್‌

10:07 PM Apr 21, 2019 | Team Udayavani |

ಚಾಮರಾಜನಗರ: ಇಚ್ಛಾಶಕ್ತಿ, ಗ್ರಾಹಕರಿಗೆ ಸ್ಪಂದನೆ, ಗುಣಮಟ್ಟ ನೀಡಿದರೆ ಸರ್ಕಾರಿ, ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಬಹುದು ಎಂಬುದಕ್ಕೆ ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆ ನಿದರ್ಶನ.

Advertisement

ಜಿಲ್ಲಾ ಕೇಂದ್ರವಾಗಿ 20 ವರ್ಷಗಳಾದರೂ ಚಾಮರಾಜನಗರದಲ್ಲಿ ಮುಂದುವರಿದ ಜಿಲ್ಲೆಗಳಂತೆ ಸರ್ಕಾರಿ ಮಾರುಕಟ್ಟೆ ಸಂಸ್ಥೆಗಳು, ಸರ್ಕಾರಿ ವಾಣಿಜ್ಯ ವ್ಯವಹಾರಗಳು ಅಭಿವೃದ್ಧಿ ಹೊಂದಿಲ್ಲ. ಮೂರು ವರ್ಷಗಳಿಗೂ ಮುಂಚೆ ಇಲ್ಲಿ ಹಾಪ್‌ಕಾಮ್ಸ್‌ ತರಕಾರಿ ಮಳಿಗೆಗಳೂ ಕೂಡ ಇರಲಿಲ್ಲ.

3 ವರ್ಷದ ಹಿಂದೆಯೇ ಅಸ್ತಿತ್ವಕ್ಕೆ: ಇದನ್ನ ಮನಗಂಡು ತೋಟಗಾರಿಕೆ ಬೆಳೆಗಾರರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣ ಸಂಘ (Horticultural Producers’ Cooperative Marketing and Processing Society ಹಾಪ್‌ಕಾಮ್ಸ್‌) ವನ್ನು ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾಯಿತು. ಹಾಪ್‌ಕಾಮ್ಸ್‌ಗೆ ನೂತನ ಆಡಳಿತ ಮಂಡಳಿಯನ್ನೂ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘ ಅಸಿತ್ವಕ್ಕೆ ಬಂದ ನಂತರ ನಗರದ ಕೆಲವು ಸ್ಥಳಗಳನ್ನು ಗುರುತಿಸಿ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಸಹ ಸ್ಥಾಪಿಸಲಾಯಿತು.

ಖಾಸಗಿ ವ್ಯಾಪಾರಿಗಳಿಗೆ ಸೆಡ್ಡು: ಇವುಗಳಲ್ಲಿ ಎರಡು ಮೂರು ಮಳಿಗೆಗಳಷ್ಟೇ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲೂ ಎರಡು ಹಣ್ಣುಗಳ ಮಾರಾಟಕ್ಕೆ ಸೀಮಿತವಾಗಿವೆ. ಇನ್ನುಳಿದಂತೆ ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆ ಮಾತ್ರ ಜನರ ನಿತ್ಯದ ಬಳಕೆಗೆ ಅಗತ್ಯವಾದ ತರಕಾರಿಗಳು, ಹಣ್ಣುಗಳನ್ನು ಮಾರಾಟ ಮಾಡುತ್ತಿದೆ. ಉಳಿದ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಕೆಲವು ನಿರ್ವಹಣೆಯಿಲ್ಲದೆ ನಷ್ಟದಿಂದ ಮುಚ್ಚಿ ಹೋದವು. ಇನ್ನೆರಡು ಮೂರು ಸಮರ್ಪಕವಾಗಿ ನಡೆಯುತ್ತಿಲ್ಲ. ಅದರೆ ನ್ಯಾಯಾಲಯ ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆ ಮಾತ್ರ ಖಾಸಗಿ ವ್ಯಾಪಾರಸ್ಥರಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ಮೊದಲು 3 ಕಿ.ಮೀ. ಹೋಗಬೇಕಿತ್ತು: ನ್ಯಾಯಾಲಯ ರಸ್ತೆಗೆ ಹೊಂದಿಕೊಂಡಂತೆ ನಗರದ ಪ್ರಸಿದ್ಧ ಬಡಾವಣೆ ಹೌಸಿಂಗ್‌ ಬೋರ್ಡ್‌ ಕಾಲೋನಿ, ಪಿಡಬ್ಲೂಡಿ ಕಾಲೋನಿ, ಕಾರಾಗೃಹ ಹಿಂಭಾಗದ ಬಡಾವಣೆ, ಬುದ್ಧನಗರ ಮತ್ತಿತರ ಜನವಸತಿ ಪ್ರದೇಶಗಳಿವೆ. ಈ ಬಡಾವಣೆಗಳ ಜನರು ಹಾಪ್‌ಕಾಮ್ಸ್‌ ತರಕಾರಿ ಮಳಿಗೆ ಸ್ಥಾಪನೆಯಾಗುವ ಮುಂಚೆ 3 ಕಿ.ಮೀ. ದೂರ ಹೋಗಿ ನಗರದ ಅಂಗಡಿ ಬೀದಿಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲೇ ತರಕಾರಿಗಳನ್ನು ಕೊಳ್ಳಬೇಕಾಗಿತ್ತು.

Advertisement

ಗುಣಮಟ್ಟದ ತರಕಾರಿ ಪೂರೈಕೆ: ಆದರೆ ಈ ಹಾಪ್‌ಕಾಮ್ಸ್‌ ಮಳಿಗೆ ಸ್ಥಾಪನೆಯಾದ ನಂತರ ಜನರು ನಿಧಾನವಾಗಿ ಇಲ್ಲಿ ತರಕಾರಿಗಾಗಿ ಬರಲಾರಂಭಿಸಿದರು. ಆರಂಭದ ಕೆಲವು ತಿಂಗಳು ಈ ಮಳಿಗೆ ಪಡೆದವರಿಗೆ ನಷ್ಟವೇ ಆಯಿತು. ಸರಿಯಾಗಿ ತರಕಾರಿಯ ಪೂರೈಕೆಯಾಗದೇ ಅಥವಾ ಗುಣಮಟ್ಟದ ತರಕಾರಿಗಳಿಲ್ಲದೇ ಗ್ರಾಹಕರು ಸರಿಯಾಗಿ ಬರುತ್ತಿರಲಿಲ್ಲ. ಅಲ್ಲದೇ ಸರಿಯಾಗಿ ಬಾಗಿಲು ತೆರೆಯುತ್ತಿರಲಿಲ್ಲ. ಹೀಗಾಗಿ ಗ್ರಾಹಕರು ದೂರ ಉಳಿದಿದ್ದರು. ಆದರೆ ಕಳೆದ ಒಂದು ವರ್ಷದಿಂದ ಗುಣಮಟ್ಟದ ತರಕಾರಿಗಳ ಪೂರೈಕೆ, ಗ್ರಾಹಕರಿಗೆ ಬೇಕಾದ ಎಲ್ಲ ತರಕಾರಿಗಳ ದೊರಕುವಿಕೆ, ತಾಜಾ ತರಕಾರಿಗಳು, ಖಾಸಗಿ ಮಾರುಕಟ್ಟೆಗಿಂತ ಕಡಿಮೆ ದರದಿಂದಾಗಿ ಗ್ರಾಹಕರು ಬರತೊಡಗಿದರು. ಹಾಗಾಗಿ ಪ್ರಸ್ತುತ ಈ ಮಳಿಗೆ ಚೆನ್ನಾಗಿ ನಡೆಯುತ್ತಿದೆ.

ಎಲ್ಲಾ ತರಹದ ತರಕಾರಿಗಳು ಲಭ್ಯ: ಈ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಪ್ರತಿನಿತ್ಯದ ಬಳಕೆಗೆ ಬೇಕಾದ ತರಕಾರಿಗಳಾದ ಟೊಮೆಟೋ, ಬೀನ್ಸ್‌, ಕ್ಯಾರೆಟ್‌, ಹೂಕೋಸು, ಎಲೆಕೋಸು, ಗೆಡ್ಡೆಕೋಸು, ಈರುಳ್ಳಿ, ದಪ್ಪ ಮೆಣಸಿನಕಾಯಿ, ಮಂಗಳೂರು ಸೌತೇಕಾಯಿ, ಸೌತೇಕಾಯಿ ಮತ್ತಿತರ ತರಕಾರಿಗಳು ಅಲ್ಲದೇ ತೆಂಗಿನಕಾಯಿ ಸಹ ದೊರಕುತ್ತದೆ. ಜೊತೆಗೆ ಹಣ್ಣುಗಳಾದ ಸೇಬು, ಕಿತ್ತಳೆ, ದಾಳಿಂಬೆ, ಪಪ್ಪಾಯ, ಕಲ್ಲಂಗಡಿ, ಮೂಸಂಬಿ, ಬಾಳೆಹಣ್ಣು ಇತ್ಯಾದಿ ಲಭ್ಯವಾಗುತ್ತಿವೆ.

ಬಹಳ ಅನುಕೂಲ: ಗ್ರಾಹಕರಿಗೆ ಹಾಪ್‌ಕಾಮ್ಸ್‌ನಲ್ಲಿ ಕೊಳ್ಳುವುದರಿಂದ ಪ್ರಮುಖ ಅನುಕೂಲವೆಂದರೆ ಚೌಕಾಶಿಯಿಲ್ಲದೇ ಮಿತವ್ಯಯದ ದರಕ್ಕೆ ತರಕಾರಿ, ಹಣ್ಣು ದೊರಕುತ್ತಿದೆ. ಹೀಗಾಗಿ ಹೌಸಿಂಗ್‌ ಬೋರ್ಡ್‌, ಪಿಡಬ್ಲೂಡಿ ಕಾಲೋನಿ ಮತ್ತಿತರ ಬಡಾವಣೆಗಳ ನಿವಾಸಿಗಳಿಗೆ ಬಹಳ ಅನುಕೂಲವಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಈ ಮಳಿಗೆಗೆ ಹೆಚ್ಚಿನ ಗ್ರಾಹಕರು ಬರುತ್ತಾರೆ.

ಈ ಮಳಿಗೆಯನ್ನೇ ಮಾದರಿಯಾಗಿಟ್ಟುಕೊಂಡು ಹಾಪ್‌ಕಾಮ್ಸ್‌ ಉಳಿದ ಪ್ರದೇಶಗಳಲ್ಲೂ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಯಶಸ್ವಿಗೊಳಿಸಬೇಕಾಗಿದೆ. ಹೀಗಾದಾಗ ಎಲ್ಲ ಬಡಾವಣೆಗಳ ಜನರಿಗೆ ಮಿತವ್ಯಯದ ದರದಲ್ಲಿ ತರಕಾರಿ ಹಣ್ಣು ದೊರಕುತ್ತದೆ ಎನ್ನುತ್ತಾರೆ ಗ್ರಾಹಕ ಕರಿನಂಜನಪುರ ನಂಜುಂಡಸ್ವಾಮಿ.

ಈ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ನಮಗೆ ನ್ಯಾಯವಾದ ದರಲ್ಲಿ ಉತ್ತಮ ತರಕಾರಿ ಹಣ್ಣು ದೊರಕುತ್ತದೆ. ಅಲ್ಲದೇ ಇಲ್ಲಿಂದ ತರಕಾರಿ ಮಾರುಕಟ್ಟೆ ದೂರ ಇರುವುದರಿಂದ ಇಲ್ಲಿ ಹಾಪ್‌ಕಾಮ್ಸ್‌ ಮಳಿಗೆ ಇರುವುದರಿಂದ ಬಹಳ ಅನುಕೂಲವಾಗಿದೆ.
-ಅನ್ನಪೂರ್ಣಮ್ಮ, ಗ್ರಾಹಕರು.

ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದೇ ನಮ್ಮ ಉದ್ದೇಶ. ಖಾಸಗಿಗಿಂತ ಕಡಿಮೆ ದರ, ತಾಜಾ ತರಕಾರಿಗಳ ಪೂರೈಕೆಯಿಂದ ಜನರು ಹಾಪ್‌ಕಾಮ್ಸ್‌ ಗೆ ಬರುತ್ತಿದ್ದಾರೆ.
-ಮಧು, ಮಾರಾಟಗಾರ, ಹಾಪ್‌ಕಾಮ್ಸ್‌.

* ಕೆ.ಎಸ್‌. ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next