ಒಂದು ದಿನ ನಸ್ರುದ್ದೀನ್ ಪೇಟೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಕೆಲವು ವ್ಯಾಪಾರಿಗಳು ಪುಟ್ಟಪುಟ್ಟ ಗಿಳಿಗಳನ್ನು ತಲಾ ಒಂದಕ್ಕೆ 200 ದಿನಾರ್ ಗಳಂತೆ (ಅರಬಿ ರೂಪಾಯಿ ಮೌಲ್ಯ) ಮಾರಾಟ ಮಾಡುತ್ತಿದ್ದದ್ದನ್ನು ಗಮನಿಸಿದ.
ಇಷ್ಟು ಪುಟ್ಟದಾಗಿರುವ ಒಂದು ಗಿಳಿಗೆ 200 ದಿನಾರ್ ಬೆಲೆ ಇದ್ದರೆ ನನ್ನ ಮನೆಯಲ್ಲಿ ಇರುವ ದೊಡ್ಡ ಕೋಳಿಯ ಬೆಲೆ ಖಂಡಿತವಾಗಿಯೂ 200 ದಿನಾರ್‌ಗಳಿಗಿಂತ ಅನೇಕ ಪಟ್ಟು ಹೆಚ್ಚು ಇರಲೇಬೇಕು ಎಂದು ಭಾವಿಸಿದ.
ಮಾರನೆಯ ದಿನ ನಸ್ರುದ್ದೀನ್ ಪೇಟೆಗೆ ತನ್ನ ಕೋಳಿಯಡನೆ ಬಂದ. ದೊಡ್ಡ ಮೊತ್ತದ ಹಣಕ್ಕೆ ಅದನ್ನು ಮಾರುವ ನಿರೀಕ್ಷೆಯೊಂದಿಗೆ ಕಾದು ನಿಂತ. ಆದರೆ ಯಾರೊಬ್ಬರೂ ಅದಕ್ಕೆ 5 ದಿನಾರ್ ಗಳಿಗಿಂತ ಹೆಚ್ಚು ಹಣ ಕೊಡಲು ತಯಾರಿಲ್ಲ.
ಇದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಬೇಸರದಿಂದ ಆತ ಎಲ್ಲರಿಗೂ ಕೇಳುವಂತೆ ಕೂಗಿ ಹೇಳಿದ, ಇದು ನನಗೆ ಅರ್ಥವಾಗುತ್ತಿಲ್ಲ. ನಿನ್ನೆ ಇದಕ್ಕಿಂತ ಅನೇಕ ಪಟ್ಟು ಚಿಕ್ಕದಾಗಿದ್ದ ಪಕ್ಷಿಗಳಿಗೆ ಇದಕ್ಕೆ ಕೊಡಲು ಸಿದ್ಧರಾಗಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಹಣ ಕೊಡಲು ಜನ ಸಿದ್ಧರಿದ್ದರು!
ಇದನ್ನು ಕೇಳಿದ ಒಬ್ಟಾತ ಹೇಳಿದ, ಮುಲ್ಲಾ, ಅವುಗಳು ಗಿಳಿಗಳು. ಅವು ಮನುಷ್ಯರಂತೆ ಮಾತನಾಡುತ್ತವೆ. ಆದ್ದರಿಂದ ನಿನ್ನ ಕೋಳಿಗಿಂತ ಹೆಚ್ಚು ಬೆಲೆಬಾಳುತ್ತವೆ. ನಸ್ರುದ್ದೀನ್ ಕೋಪಗೊಂಡು ಹೇಳಿದ,ಶುದ್ಧ ಅವಿವೇಕಿ. ಅವು ಮಾತನಾಡುತ್ತವೆ ಎಂಬ ಕಾರಣಕ್ಕಾಗಿ ಹೆಚ್ಚು ಬೆಲೆಯೇ? ಈ ನನ್ನ ಪಕ್ಷಿ ಅದಕ್ಕಿಂತ ಎಷ್ಟೋ ಉತ್ತಮವಾದದ್ದು. ಅದು ಹೇಗೆ? ಆಗಂತುಕ ಕೇಳಿದ. ಏಕೆಂದರೆ ಮನುಷ್ಯರ ತಲೆಯೊಳಗೆ ಇರುವಂತೆ ಇದರ ತಲೆಯಲ್ಲಿ ಎಷ್ಟೋ ಅದ್ಭುತವಾದ ಆಲೋಚನೆಗಳಿವೆ. ಅಷ್ಟೇ ಅಲ್ಲ, ಇದು ಸದಾ ವಟವವಟ ಅನ್ನುತ್ತಿದ್ದು ಇತರರ ತಲೆ ತಿನ್ನುವುದಿಲ್ಲ ಎಂದ.
- ಧನ್ಯಶ್ರೀ ಬೋಳಿಯಾರ್