ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ, ತಿಂಡಿ, ಪಾನೀಯಗಳ ಮಳಿಗೆಗಳನ್ನು ಆರಂಭಿಸಲಾಗಿದ್ದು, ಪ್ರಯಾಣಿಕರಿಗೆ ಮತ್ತು ಸಂದರ್ಶಕರಿಗೆ ಹೊಸ ಅನುಭವವನ್ನು ನೀಡಲು ಸಜ್ಜಾಗಿದೆ.
ಆಹಾರದ ಜತೆಗೆ ಮನರಂಜನೆಗೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಂತಹ ವಿನೂತನ ಕೊಡುಗೆಯನ್ನು ಪರಿಚಯಿಸಿದ ದೇಶದ ಪ್ರಥಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ನಿಲ್ದಾಣ ಪಾತ್ರವಾಗಿದೆ. ಕ್ವಾಡ್ ಬೈ ಬಿಎಲ್‌ಆರ್ ಎಂಬ ಹೆಸರಿನ ಈ ವಿನೂತನ ವ್ಯವಸ್ಥೆಯಲ್ಲಿ ಒಟ್ಟು 21 ವಿವಿಧ ಮಳಿಗೆಗಳಿವೆ.
ದಿನದ 24 ಗಂಟೆ ಕಾಲವೂ ಈ ಮಳಿಗೆಗಳು (ಮದ್ಯ ಮಾರಾಟ ಮತ್ತು ಮನರಂಜನೆಯ ಮಳಿಗೆಗಳನ್ನು ಹೊರತು ಪಡಿಸಿ) ಕಾರ್ಯ ನಿರ್ವಹಿಸಲಿದ್ದು, ವಿಮಾನ ಪ್ರಯಾಣಿಕರು ಮತ್ತು ಸಂದರ್ಶಕರಲ್ಲದೆ ನಗರದ ಸಾರ್ವಜನಿಕರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ವೀಕೆಂಡ್‌ನಲ್ಲಿ ಸಂಗೀತ ಕಾರ್ಯಕ್ರಮವೂ ಇರುತ್ತದೆ ಎಂದು ಕೆಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಕ್ವಾಡ್ ಬೈ ಬಿಎಲ್‌ಆರ್‌ನ ಸಹಾಯಕ ಉಪಾಧ್ಯಕ್ಷ (ಕಮರ್ಶಿಯಲ್) ಪ್ರವತ್ ಪೈಕ್ರೇ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅರ್ಚನಾ ಮುತ್ತಪ್ಪ, ಕ್ವಾಡ್ ಬೈ ಬಿಎಲ್‌ಆರ್‌ನ ಜನರಲ್ ಮ್ಯಾನೇಜರ್ ಡೊಮಿನಿಕ್ ದೇವಸ್ಯ ಅವರು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.
ಬ್ರಾಂಡೆಡ್ ಉತ್ಪನ್ನಗಳು: ಮಳಿಗೆಗಳನ್ನು ರಿಟೇಲ್, ಆಹಾರ ಮತ್ತು ಪೇಯ (ಫುಡ್ ಆ್ಯಂಡ್ ಬಿವರೇಜಸ್), ಫ್ಲೀ ಮಾರ್ಕೆಟ್ ಮತ್ತು ಅರೇನಾ ಎಂಬುದಾಗಿ ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇಲ್ಲಿ ಸೂಪರ್ ಡ್ರೈ, ಹೈಡಿಸೈನ್, ಟಾಯ್‌ಪೋರ್ಟ್ ಬೈ ಲೆಗೊ, ಆರೋಮಾಂಡೆ, ಗಜೆಟ್ ಪ್ಲಾಝಾದಂತಹ ಬ್ರಾಂಡ್‌ಗಳಿವೆ. ಆಹಾರ ಮಳಿಗೆಗಳು ಉನ್ನತ ಅಡುಗೆ ತಜ್ಞರ ಗೊರ್ಮೆಟ್ ಶೈಲಿಯ ಆಹಾರ ವಸ್ತುಗಳನ್ನು ಅತ್ಯಂತ ಕಲಾತ್ಮಕ ರೀತಿಯಲ್ಲಿ ಪ್ರಸ್ತುತ ಪಡಿಸಲು ಸಿದ್ಧವಾಗಿವೆ.
ಬಾರ್ಲಿ ಆ್ಯಂಡ್ ಗ್ರೇಪ್ಸ್ ಕೆಫೆ, ವಿಂಡ್‌ಮಿಲ್ ಕ್ರಾಫ್ಟ್ವರ್ಕ್, ಕೆಫೆ ಅಜೂರೆ, ಹೌಸ್ ಆಫ್ ಕೆಬಾಬ್ಸ್, ದಿ ವೋಕ್ ಶಾಪ್, ಬರ್ರಿಟೊ ಬಾಯ್ಸ, ಡೋನರ್ ಆ್ಯಂಡ್ ಗೈರೋಸ್, ಫೊಜೆನ್ ಬಾಟಲ್ ಆ್ಯಂಡ್ ಗ್ರೇಟ್ ಫುಡ್ಸ್ ಆಫ್ ಇಂಡಿಯಾ, ಬೆಂಗಳೂರಿನ ಪ್ರಸಿದ್ಧ ಮಳಿಗೆ ಬ್ರಿಯಾ, ಡಸರ್ಟ್ ಮತ್ತು ಕಾಫಿ ಪ್ರಿಯರಿಗಾಗಿ ಹಾಗೆನ್- ಡಾಜ್, ಸ್ಮೂರ್, ಕೆಫೆ ಕಾಫಿ ಡೇ- ಇವು ಪ್ರಮುಖ ಮಳಿಗೆಗಳು.
ಅರೇನಾ: ರಿಟೇಲ್ ಪ್ಲಾಜಾದ ಕೇಂದ್ರ ಭಾಗದಲ್ಲಿ ಎಲ್‌ಇಡಿ ವಿಡಿಯೊ ಮತ್ತು ಅರೇನಾ ಇದೆ. ಇಲ್ಲಿ ವಿಶೇಷವಾಗಿ ವೀಕೆಂಡ್ ದಿನಗಳಲ್ಲಿ ಕಲಾವಿದರಿಂದ ನಾಟಕ, ಸಂಗೀತ ಕಛೇರಿ, ಕಾವ್ಯ ವಾಚನ, ಪುಸ್ತಕ ವಾಚನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.