ಕಲಘಟಗಿ: ತನ್ನನ್ನು ತಾನು ಸುಟ್ಟು ಬೆಳಕನ್ನು ಯಾವುದೇ ಭೇದ ಭಾವವಿಲ್ಲದೇ ನೀಡುವ ಜ್ಯೋತಿ ಸ್ವರೂಪದಂತೆ ಗುಣಮಟ್ಟದ ಶಿಕ್ಷಣ ಬೋಧಿಸುವ ಗುರುಗಳು ಇಂದು ವಿಶ್ವದಾದ್ಯಂತ ಅತೀ ಅವಶ್ಯವಾಗಿದ್ದಾರೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ಪಟ್ಟಣದ ಜನತಾ ಇಂಗ್ಲಿಷ್ ಮತ್ತು ಗರ್ಲ್ಸ್ ಇಂಗ್ಲಿಷ್ ಸ್ಕೂಲ್‌ನ 1997-98ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ 1999-2000ನೇ ಸಾಲಿನ ಜಿ.ಇ. ಕಾಲೇಜಿನ ಪಿಯು ವಿದ್ಯಾರ್ಥಿಗಳು ತಾವು ಕಲಿತ ಶಾಲೆಯಲ್ಲಿಯೇ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಯಾವುದಾದರೊಂದು ಸ್ಥಾನವಿದ್ದರೆ ಅದು ಗುರುವಿನ ಸ್ಥಾನ. ಕಳೆದ 20 ವರ್ಷಗಳಿಂದ ಸಮಾಜದ ನಾನಾ ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟಪೂರ್ಣ ಜೀವನ ನಡೆಸುತ್ತಿದ್ದು, ಇಂದು ಎಲ್ಲರೂ ಒಂದೆಡೆ ಸೇರಿ ತಮ್ಮ ಬಾಲ್ಯದ ಗುರುಗಳನ್ನು ನೆನೆಯುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನೂ ಅಭಿನಂದಿಸಿದರು.
ಕಲಘಟಗಿ ಶಿಕ್ಷಣ ಸಮಿತಿಯ ಜನತಾ ಇಂಗ್ಲಿಷ್ ಸ್ಕೂಲ್, ಪ್ರೊಗ್ರೆಸ್ಸಿವ್ ಎಜುಕೇಶನಲ್ ಸೊಸೈಟಿಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್ ಹಾಗೂ ಜಿ.ಇ. ಸಂಯುಕ್ತ ಪಿಯು ಮಹಾವಿದ್ಯಾಲಯದ ಆಡಳಿತ ಮಂಡಳಿಯವರನ್ನು, ನಿವೃತ್ತ ಮತ್ತು ಹಾಲಿ ಗುರುವೃಂದದವರನ್ನು ಹಾಗೂ ಬೋಧಕೇತರ ಸಿಬ್ಬಂದಿಯನ್ನೂ ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಥೆಯ ಚೇರ್‌ಮನ್ ಡಾ| ಎಚ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಬಿ. ಪಾಟೀಲಕುಲಕರ್ಣಿ, ನಿರ್ದೇಶಕರಾದ ಎಸ್.ಎಸ್. ಸಾವುಕಾರ, ವಾಮನ ನಾಡಗೇರ, ಎಮ್.ಎ. ವರದಾನಿ, ಪ್ರಾಚಾರ್ಯ ಎಸ್.ಎಸ್. ಹಾವೇರಿ, ಮುಖ್ಯೋಪಾಧ್ಯಾಯರಾದ ಕೆ.ಐ. ಕೊಂಗಿ, ಶ್ರೀಧರ ಪಾಟೀಲಕುಲಕರ್ಣಿ, ಸೈನಿಕ ಸೇವೆಯಲ್ಲಿರುವ ಹಳೆಯ ವಿದ್ಯಾರ್ಥಿ ಎನ್.ಸಿ. ಪಾಟೀಲ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಎಲ್.ಆರ್. ಯಾದಪ್ಪನವರ, ಎ.ಜಿ. ಅಸೂಟಿ, ಯು.ಜಿ. ಅಸೂಟಿ, ಆರ್.ಎಲ್. ಕುಲಕರ್ಣಿ, ಆರ್.ಸಿ. ಕರಗುದರಿ, ಎಸ್.ಡಿ. ಪೂಜಾರ ಸನ್ಮಾನ ಸ್ವೀಕರಿಸಿದರು. ಹಳೆಯ ವಿದ್ಯಾರ್ಥಿಗಳಾದ ದೀಪಕ ಶೆಟ್ಟಿ, ಸಂತೋಷ ವಾಲಿಶೆಟ್ಟರ, ಮುಕುಂದ ಢವಳೆ, ರಾಘವೇಂದ್ರ ಅಳ್ನಾವರ, ರಾಜಶೇಖರ ದಾಗಿನದಾರ, ಪ್ರಕಾಶ ಬೆಟದೂರ, ಮೃತ್ಯುಂಜಯ ಬಾಳಿಕಾಯಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಅಕ್ಷತಾ ಕರಡೆಣ್ಣವರ ಮತ್ತು ಮಂಜುಳಾ ಜಾವೂರ ನಿರೂಪಿಸಿದರು. ಪರಿಮಳಾ ದೇಶಪಾಂಡೆ ಸ್ವಾಗತಿಸಿದರು. ಡಾ| ತ್ರಿವೇಣಿ ಸಾವಂತ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಪತ್ತಾರ ವಂದಿಸಿದರು.