ಬನ್ನೂರು: ಗ್ರಾಮಾಂತರ ಪ್ರದೇಶಗಳಲ್ಲೂ ಇಂದು ಇಂಗ್ಲಿಷ್ ಭಾಷಾ ವ್ಯಾಮೋಹ ಆವರಿಸಿದ್ದು ಕನ್ನಡ ಶಾಲೆಗಳಿಗೆ ದಾಖಲಾತಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಇಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಉತ್ತಮ ತರಬೇತಿ ಹೊಂದಿರುವ ಶಿಕ್ಷಕ ವೃಂದವಿದ್ದು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಾಗಿ ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರಿ ಸೀಟು ಬೇಕು. ವಿದ್ಯಾಭ್ಯಾಸವಾದ ನಂತರ ಅವರಿಗೆ ಸರ್ಕಾರಿ ಉದ್ಯೋಗಬೇಕೆಂದು ಕೇಳುವ ಜನರು ಪ್ರಾಥಮಿಕ ಹಂತದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇಕೆ ದಾಖಲಾತಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರದಿಂದ ಶಿಕ್ಷಣ ಇಲಾಖೆಯ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವಲ್ಲಿ ಹೊಸ ಹೊಸ ಯೋಜನೆ ಹಮ್ಮಿಕೊಂಡು, ಅದಕ್ಕೆ ಅನ್ವಯವಾ ಗುವಂತೆ ಉತ್ತಮ ತರಬೇತಿ ಹೊಂದಿರುವ ಶಿಕ್ಷಕರನ್ನು ನೇಮಕಾತಿ ಮಾಡಿ, ಆಗ್ಗಿಂದಾಗ್ಗೆ ಶಿಕ್ಷಕರಿಗೆ ತರಬೇತಿ ನೀಡಿ ಮಕ್ಕಳ ಸರ್ವಾಂಗೀಣ ವೀಕಾಸವನ್ನುಂಟು ಮಾಡುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸರ್ಕಾರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 6 ರಿಂದ 14 ವರ್ಷ ಒಳಪಟ್ಟ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ನೀಡುತ್ತಿದ್ದು, ಎಲ್ಲ ಮಕ್ಕಳಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತವಾದ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಉಚಿತ ಬೈಸಿಕಲ್, ಕ್ಷೀರಭಾಗ್ಯ, ಅಕ್ಷರ ದಾಸೋಹದಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಪುಷ್ಪಲತಾ ಮಾತನಾಡಿ, ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದು ಪೋಷಕರು ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವುದೇ ತಾರತಮ್ಯ ಇಲ್ಲದೇ 6 ರಿಂದ 14 ವರ್ಷ ಒಳಪಟ್ಟ ಮಕ್ಕಳನ್ನು ಸಮೀಪದ ಶಾಲೆಗಳಿಗೆ ಸೇರಿಸುವಂತೆ ಮನವಿ ಮಾಡಿದರು.
ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಿ, ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮ, ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು. ಜೊತೆಗೆ ಸರ್ಕಾರದಿಂದ ಮಕ್ಕಳಿಗೆ ದೊರೆಯುವ ಸೌಲಭ್ಯ ಕುರಿತು ತಿಳಿಸಿದರು. ನಂತರ ವಿಶೇಷ ದಾಖಲಾತಿ ಆಂದೋಲನ ಜಾಥಾಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಜಾಥಾ ಕೈಗೊಂಡು ಪೋಷಕರ ಗಮನ ಸೆಳೆದರು.
ಪುರಸಭಾ ಉಪಾಧ್ಯಕ್ಷ ರಾಮಲಿಂಗು, ಪುರಸಭಾ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಸುಕನ್ಯಕಂಬು, ಕಂಬುನಾಯಕ್, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ಮಾಜಿ ಶಿಕ್ಷಕ ಸಂಘದ ಅಧ್ಯಕ್ಷ ಗಂಗಾಧರ್, ಬಿಆರ್‌ಪಿ ಶಂಕರ್, ಮಹದೇವಸ್ವಾಮಿ, ಸರ್ಕಾರಿ ಬಿ ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ, ರೇವಮ್ಮ, ಗೋಪಾಲ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಇದ್ದರು.