ಕಾಸರಗೋಡು: ಚುನಾವಣೆ ಕರ್ತವ್ಯ ಸಿಬಂದಿಗೆ, ಜಿಲ್ಲೆಯ ಮತದಾರರಿಗೆ ಮತಗಟ್ಟೆಯನ್ನು ಪತ್ತೆ ಮಾಡುವುದು ಇನ್ನು ಕಷ್ಟಸಾಧ್ಯವಲ್ಲ.
ಕ್ಯೂ.ಆರ್.ಕೋಡ್ ಸೌಲಭ್ಯ ಮೂಲಕ ಯಾವ ಮತಗಟ್ಟೆಯನ್ನೂ ನಿರಾಯಾಸವಾಗಿ ಕಂಡುಹಿಡಿಯಬಹುದಾಗಿದೆ. ದೇಶ ದಲ್ಲೇ ಪ್ರಥಮಬಾರಿಗೆ ಚುನಾವಣೆ ಸಂಬಂಧ ಒಂದು ಜಿಲ್ಲೆಯಲ್ಲಿ ಈ ಸೌಲಭ್ಯ ಬಳಸಲಾಗುತ್ತಿದೆ.
ಕ್ಯೂ.ಆರ್. ಸೌಲಭ್ಯ ಮೂಲಕ ಮತಗಟ್ಟೆ ಇರುವ ಪ್ರದೇಶ ಸಹಿತ ಎಲ್ಲ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪತ್ತೆಮಾಡಬಹುದಾಗಿದೆ. ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಫಿನೆಕ್ಸ್ ಇನ್ನೋವೇಷನ್ ಎಂಬ ಸ್ಟಾರ್ಟ್ ಅಪ್ ಕಂಪನಿ ಈ ಯೋಜನೆಗೆ ಬೇಕಾದ ಅಪ್ಲಿಕೇಷನ್ ನಿರ್ಮಿಸಿದೆ.
ಆಂಡ್ರಾಯ್ಡ ಪ್ಲಾಟ್‌ಫಾರ್ಮ್ ನ ಗೂಗಲ್ ಪ್ಲೇಸೋrರ್‌ನಿಂದ ಬೂತ್ ಲೊಕೇಟ್ ಕೆ.ಎಸ್.ಡಿ. ಎಂಬ ಅಪ್ಲಿಕೇಷನ್ ಮೊದಲು ಡೌನ್ ಲೋಡ್ ಮಾಡಬೇಕು. ಚುನಾವನೆ ಸಿಬಂದಿ ಅವರಿಗೆ ಲಭಿಸುವ ಕ್ಯೂ.ಆರ್. ಕೋಡ್ ಮೊಬೈಲ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿದರೆ ಮಾತ್ರ ಸಾಕು. ತತ್‌ಕ್ಷಣ ಬೂತ್ ಸಂಬಂಧ ಎಲ್ಲ ಮಾಹಿತಿ, ದೃಶ್ಯ ಲಭಿಸುತ್ತದೆ.
ಈ ಮೂಲಕ ಜಿಲ್ಲೆಯ ವಿವಿಧ ಪ್ರದೇಶಗಳ ಕುರಿತು ಹೆಚ್ಚುವರಿ ಮಾಹಿತಿ ಲಭಿಸಲು ಸಾಧ್ಯ. ಜತೆಗ ಜಿ.ಪಿ.ಎಸ್. ಸೌಲಭ್ಯದ ಸಹಾಯದೊಂದಿಗೆ ಗುಗಲ್ ಮ್ಯಾಪ್‌ನ ಸಂಪರ್ಕ ಪಡೆದು ಸುಲಭದಲ್ಲಿ ಎಲ್ಲ ರಸ್ತೆಗಳ ಮಾಹಿತಿ ತಿಳಿಯಬಹುದು. ಇದು ಬೂತ್‌ಗೆ ತಲಪಲು ಸಹಾಯಕವಾಗುತ್ತದೆ.
ಜಿಲ್ಲೆಯ ಪ್ರತಿ ಬೂತ್‌ಗೂ ಪ್ರತ್ಯೇಕ ಕ್ಯೂ.ಆರ್. ಕೋಡ್ ಜಿಲ್ಲಾಧಿಕಾರಿ ಅವರ ವೆಬ್‌ಸೈಟ್ ಮೂಲಕ ಲಭಿಸಲಿದೆ. ಬೂತ್‌ಗೆ ಮಂಜೂರಾದ ಯು.ಐ.ಡಿ. ನಂಬ್ರ ನೀಡಿ ಸಾರ್ವಜನಿಕರಿಗೂ ಈ ಅಪ್ಲಿಕೇಷನ್ ಮೂಲಕ ಮತಗಟ್ಟೆಗಳ ಮಾಹಿತಿ ತಿಳಿಯಬಹುದಾಗಿದೆ.
ಇತರ ಜಿಲ್ಲೆಗಳಿಂದ ಸಿಬಂದಿ ಕಾಸರಗೋಡಿಗೆ ಉದ್ಯೋಗ ಸಂಬಂಧ ಬರುವ ವೇಳೆ ಈ ಸೌಲಭ್ಯ ಪೂರಕವಾಗಿದೆ. ಜತೆಗೆ ದೇಶದ ಇತರ ಭಾಗಗಗಳಿಂದ ಆಗಮಿಸುವ ನಿರೀಕ್ಷಕರಿಗೂ ಯಾವುದೇ ತ್ರಾಸಗಳಿಲ್ಲದೆ, ಮುನ್ಸೂಚನೆ ನೀಡದೆ ಮತಗಟ್ಟೆಗಳಿಗೆ ತಲಪಲು ಈ ಮೊಬೈಲ್ ಆ್ಯಪ್ ಮೂಲಕ ಸಾಧ್ಯ.