Advertisement
ಪಾಲಿಕೆ ವ್ಯಾಪ್ತಿಯ ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಸಂಕೀರ್ಣಗಳಲ್ಲಿ ತ್ಯಾಜ್ಯ ಸಂಗ್ರಹ ಕುರಿತು ನಿಗಾ ವಹಿಸಲು ಸ್ಮಾರ್ಟ್‌ಸಿಟಿ ಯೋಜನೆಯಡಿ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಸದ್ಯ ನಗರದ ಸುಮಾರು 20,000 ಕಟ್ಟಡಗಳಿಗೆ ಕ್ಯೂ ಆರ್ ಕೋಡ್ ಅಳವಡಿಸಲಾಗಿದ್ದು, ಇನ್ನೂ 80,000ದಷ್ಟು ಕಟ್ಟಡಕ್ಕೆ ಕ್ಯೂ ಆರ್ ಕೋಡ್ ಅಳವಡಿಸಲು ಬಾಕಿ ಇದೆ. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆ ಅಂತಿಮಗೊಳ್ಳಲಿದೆ.
Related Articles
Advertisement
ಹಣಕಾಸಿನ ವ್ಯವಹಾರಗಳಿಗೆ ಆನ್‌ಲೈನ್ ಪೇಮೆಂಟ್‌ಗೆ ಬಳಸುವ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಈ ಕೋಡ್ ಸಿದ್ಧಪಡಿಸಲಾಗಿದೆ. ತ್ಯಾಜ್ಯ ಉತ್ಪಾದನೆ ಕೇಂದ್ರಗಳಾದ ಮನೆ, ಹೊಟೇಲ್, ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್, ಮಳಿಗೆಗಳು, ವಿವಿಧ ಉದ್ಯಮಗಳ ಕಾಂಪೌಂಡ್‌ಗಳಿಗೆ ಕ್ಯೂ-ಆರ್ ಕೋಡ್ ಅಂಟಿಸಲಾಗುತ್ತದೆ.
ಕಸ ಸಂಗ್ರಹಿಸುವ ಪೌರ ಕಾರ್ಮಿಕರಿಗೆ ಕ್ಯೂ ಆರ್ ಕೋಡ್ ಸ್ಕ್ಯಾನ್‌ಮಾಡಲು ಪ್ರತ್ಯೇಕ ಯಂತ್ರ ನೀಡಲಾಗುತ್ತದೆ. ಅವರು ಸ್ಕ್ಯಾನ್ ಮಾಡಿ ಆ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ
ಈ ಸಂದೇಶ ರವಾನೆಯಾಗುತ್ತದೆ. ಸೆಂಟರ್‌ನಲ್ಲಿರುವ ಅಧಿಕಾರಿ/ಸಿಬಂದಿ ಇದನ್ನು ಗಮನಿಸುತ್ತಾರೆ. ಒಂದು ವೇಳೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡದೇ ಇದ್ದರೆ ಆ ಮನೆಯಿಂದ ಕಸ ಸಂಗ್ರಹಿಸಿಲ್ಲವೆಂದು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯಸಂಗ್ರಹದ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಈಗಾಗಲೇ ಪ್ರಾಯೋಗಿಕವಾಗಿ ಕ್ಯೂ ಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದೆ. ಇದೀಗ ಎಲ್ಲ ವಾರ್ಡ್‌ಗಳಿಗೂ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಈಗಾಗಲೇ ಮನೆಗಳಿಗೆ ಕ್ಯೂ ಆರ್ ಕೋಡ್ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್