Advertisement

ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗೆ ಸರತಿ ವ್ಯವಸ್ಥೆ : ಸಚಿವ ಲಿಂಬಾವಳಿ

07:28 PM May 26, 2021 | Team Udayavani |

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗಾಗಿ ಇನ್ನು ಮುಂದೆ ಸರತಿ ಸಾಲಿನ ಕ್ರಮವನ್ನು ಅನುಸರಿಸಲಾಗುವುದು, ಬೆಡ್ ಬುಕ್ ಮಾಡಲು ಕರೆ ಮಾಡುವವರಿಗೆ ಕ್ಯೂ ವ್ಯವಸ್ಥೆ ಮೂಲಕ ಹಾಸಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

Advertisement

ಅವರು ನಗರದ ಆರೋಗ್ಯ ಸೌಧದಲ್ಲಿ ಕೋವಿಡ್ ವಾರ್ ರೂಮ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೋಂಕಿತರು ಬೆಡ್ ಬುಕ್ ಮಾಡಲು ಕರೆ ಮಾಡಿದಾಗ ಅವರಿಗೆ ಆಟೋಮ್ಯಾಟಿಕ್ ಕ್ಯೂ ಸಂಖ್ಯೆ ಕೊಡಲಾಗುತ್ತದೆ. ಒಟ್ಟು ರಿಜಿಸ್ಟ್ರೇಷನ್ ಸಂಖ್ಯೆ ಆಧಾರದಲ್ಲಿ ಅವರು ಯಾವ ಸಂಖ್ಯೆಯಲ್ಲಿದ್ದಾರೆ ,ಈಗ ಯಾವ ಸಂಖ್ಯೆಯ ದಾಖಲಾತಿ ನಡೆಯುತ್ತಿದೆ ಎಂಬ ಮಾಹಿತಿ ಅವರಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ . ಈ ವ್ಯವಸ್ಥೆ ಮುಂದಿನ ಎರಡು ದಿನಗಳಲ್ಲಿ ಆರಂಭವಾಗಲಿದೆ
ಇದರ ಪರಿಣಾಮಗಳನ್ನು ಅನುಸರಿಸಿ ಮುಂದೆ ಇದನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು , ರೋಗದ ತೀವ್ರತೆ ಅನುಸರಿಸಿ ಅವರಿಗೆ ಹಾಸಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ :ಸಿದ್ದರಾಮಯ್ಯ  ತಿರುಕನ ಕನಸು ಕಾಣುತ್ತಿದ್ದಾರೆ : ವಿಶ್ವನಾಥ್ ತಿರುಗೇಟು

ವಾರ್ ರೂಮ್ ನ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ಮಾಡಲು ಈಗಿರುವ ಸಾಫ್ಟ್ವೇರ್ ಗೆ ಅನೇಕ ಸುಧಾರಣೆ ಮಾಡಲು ಉದ್ದೇಶಿಸಿದೆ ಅದು ಕೆಲವೇ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದರು.

Advertisement

ಈಗಿರುವ ಎಸ್ಎಂಎಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ ಹಾಸಿಗೆ ಹಂಚಿಕೆಯಾಗಿರುವ ರೋಗಿಗಳು ನಾಲ್ಕು ಗಂಟೆಯ ಒಳಗೆ ಆಸ್ಪತ್ರೆಯ ತಲುಪದೇ ಹೋದರೆ ಅವರಿಗೆ ಮತ್ತೆ ಎಸ್ಎಂಎಸ್ ಮೂಲಕ ಜಾಗೃತ ಗೊಳಿಸುವ ಮೆಸೇಜ್ ಕಳುಹಿಸಲಾಗುತ್ತದೆ, ಮತ್ತು ಆಸ್ಪತ್ರೆಯಲ್ಲಿನ ನೋಡಲ್ ಅಧಿಕಾರಿ ಗೆ ಕೂಡ ಮೆಸೇಜ್ ಹೋಗುತ್ತದೆ.

ಪ್ರಸ್ತುತ ಟ್ರಯಾಜಿಂಗ್ ಕೇಂದ್ರಗಳಲ್ಲಿ ದೈಹಿಕ ತಪಾಸಣೆಗೆ ಒಳಗಾಗುವವರಿಗೆ ವೈದ್ಯರ ಸಲಹೆ ಮೇರೆಗೆ ಅದರ ವ್ಯಾಪ್ತಿಯ ರೆಫರಲ್ ಆಸ್ಪತ್ರೆ ಗಳಲ್ಲಿ ಹಾಸಿಗೆ ಕಾಯ್ದಿರಿಸಲು ವ್ಯವಸ್ಥೆ ರೂಪಿಸಿ ಎಂದು ಅವರು ಹೇಳಿದರು.

ರೋಗಿಗಳ ವಿವರಗಳನ್ನು ಬಿಬಿಎಂಪಿ ಸಿದ್ಧಪಡಿಸಿರುವ ಮಾದರಿ ಅರ್ಜಿಯಲ್ಲಿ ತುಂಬುವ ಕುರಿತು ಟ್ರಯಾಜಿಂಗ್ ಕೇಂದ್ರದ ವೈದ್ಯರಿಗೆ ಹಾಗೂ ಸಹಾಯಕರಿಗೆ ತರಬೇತಿ ಶಿಬಿರಗಳನ್ನು ಸಹ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ರಾಜ್ಯ ವಾರ್ ರೂಮ್ ಹಾಗೂ ಬಿಬಿಎಂಪಿ ವಾರ್ ರೂಮ್ ಇವುಗಳನ್ನು ಒಂದೇ ಸೂರಿನಡಿ ತರಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಅವಶ್ಯ ಇರುವ ಕಡೆಗಳಲ್ಲಿ ಮತ್ತು ಉತ್ಸಾಹಿ ಸ್ವಯಂಸೇವಕ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಿ ಕೋವಿಡ್ 19 ನಿರ್ವಹಣೆಯಲ್ಲಿ ಸಹಕರಿಸಲು ಮುಂದೆ ಬಂದರೆ ಅವರ ನೆರವು ಪಡೆದುಕೊಂಡು ಸೋಂಕಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಮುಂದೆ ಬರಲಿರುವ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಮುಂಬಯಿನಲ್ಲಿ ಮಾಡಿರುವ ಮಾದರಿಯನ್ನು ಅನುಸರಿಸಿ ಮಕ್ಕಳಿಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡಗಳ ಸೃಜನೆಗೆ ಕ್ರಮ ವಹಿಸಲು ಸಚಿವರು ಸೂಚಿಸಿದರು.

ಸಭೆಯಲ್ಲಿ ಬಿಬಿಎಂಪಿ ಕೋವಿಡ್ ವಾರ್ ರೂಮ್ ನಿರ್ವಹಾಧಿಕಾರಿ ಪೊನ್ನುರಾಜ್, ಕುಮಾರ್ ಪುಷ್ಕರ್, ವಿಶ್ವಜಿತ್, ವಿಶೇಷ ಆಯುಕ್ತ ರಣದೀಪ್, ಡಾಕ್ಟರ್ ಅರುಂಧತಿ ಚಂದ್ರಶೇಖರ್,ಎನ್. ಟಿ. ಅಬ್ರೂ ಹಾಗೂ ಡಾ. ಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next